ಎಸ್. ದಿವಾಕರ್ ಅವರ ಮುನ್ನುಡಿಯಿಂದ ಆಯ್ದ ಭಾಗ
ಇದು ರಾಮಾನುಜನ್ ರ ಕನ್ನಡ ಕೃತಿಗಳ ಸಮಗ್ರ ಸಂಪುಟ . ಅವರ ಮೂರು ಕವನ ಸಂಕಲನಗಳು , ಒಂದು ಕಾದಂಬರಿ, ನಾಲ್ಕು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆ, ಎಲ್ಲವೂ ಇಲ್ಲಿವೆ. ‘ನಡೆದು ಬಂದ ದಾರಿ’ ಗ್ರಂಥದಲ್ಲೂ ‘ಸಾಕ್ಷಿ’ ಪತ್ರಿಕೆಯಲ್ಲೂ ಪ್ರಕಟವಾಗಿರುವ ಕೆಲವು ಕವನಗಳೂ ಕಳೆದ ಶತಮಾನದ ಐವತ್ತರ ದಶಕದಲ್ಲಿ ಅವರು ‘ಕೊರವಂಜಿ’ ಪತ್ರಿಕೆಯಲ್ಲಿ ಬರೆದ ಕೆಲವು ನಗೆ ಬರಹಗಳೂ ಇಲ್ಲಿ ಸೇರಿವೆ. ಬಹುಶಃ ರಾಮಾನುಜನ್ ರ ಮೊದಲ ಪ್ರಯತ್ನಗಳಾಗಿರಬಹುದಾದ ಈ ನಗೆ ಬರಹಗಳ ಓದು ಅವರ ಸೃಜನಶೀಲತೆಯ ವಿಕಾಸವನ್ನರಿಯಲು ಸಹಾಯಕವಾದೀತೆಂದು ಭಾವಿಸಿದ್ದೇನೆ . ಜೊತೆಗೆ ಈ ಸಂಕಲನದ ಕಡೆಯ ಭಾಗದಲ್ಲಿರುವುದು ರಾಮಾನುಜನ್ ಬಿಟ್ಟು ಹೋಗಿರುವ ಹಸ್ತ ಪ್ರತಿಯ ಒಂದು ಕಟ್ಟು .
ಇದರಲ್ಲಿ ಕೆಲವು ಕವನಗಳು , ನಗೆ ಬರಹಗಳು, ಕಾದಂಬರಿಯೊಂದಕ್ಕಾಗಿ ಮಾಡಿಕೊಂಡ ಟಿಪ್ಪಣಿಗಳು , ಹೀಗೆ ಬಗೆಬಗೆಯ ಬರಹ ತಮ್ಮ ಅಪೂರ್ಣ ಸ್ಥಿತಿಯಲ್ಲಿವೆ . ರಾಮಾನುಜನ್ ಬದುಕಿದ್ದಾಗ ಅವರ ಸಾಹಿತ್ಯಕ್ಕೆ ನಿಜಕ್ಕೂ ಸಲ್ಲಬೇಕಾದ ವಿಮರ್ಶಾ ಮನ್ನಣೆ ಸಲ್ಲಲೇ ಇಲ್ಲ . ಅವರ ಕಾವ್ಯದ ಬಗ್ಗೆ ಅಲ್ಲೊಂದು ಇಲ್ಲೊಂದು ಲೇಖನ ಬಿಟ್ಟರೆ ಇತರ ಕೃತಿಗಳ ಬಗ್ಗೆ ಚರ್ಚೆಯಾದದ್ದೇ ಅಪರೂಪ . ಈ ಸಮಗ್ರ ಸಂಪುಟದ ಪ್ರಕಟಣೆ ಅವರ ಒಟ್ಟು ಸಾಹಿತ್ಯದ ಮರು ಓದಿಗೆ , ವಿಸ್ತೃತ ಚರ್ಚೆಗೆ , ಅಧ್ಯಯನಕ್ಕೆ , ವಿಮರ್ಶೆಗೆ ದಾರಿ ಮಾಡಬಹುದೆಂಬ ಆಶಯ ನನ್ನದು .
ರಾಮಾನುಜನ್ನರ ಬಿಡಿ ಕೃತಿಗಳನ್ನು ಪ್ರಕಟಿಸಿದ ಮನೋಹರ ಗ್ರಂಥ ಮಾಲೆಯೇ ಈ ಸಮಗ್ರ ಸಂಪುಟವನ್ನೂ ಪ್ರಕಟಿಸುತ್ತಿರುವುದು ಅರ್ಥಪೂರ್ಣ. ಇದರ ಸಂಪಾದನೆಯನ್ನು ನನಗೇ ವಹಿಸಿಕೊಟ್ಟ ಶ್ರೀ ರಮಾಕಾಂತ ಜೋಶಿಯವರ ವಿಶ್ವಾಸ ದೊಡ್ಡದು. ಅವರಿಗೂ ,ರಾಮಾನುಜನ್ನರ ‘ಕೊರವಂಜಿಯ’ ಬರಹಗಳನ್ನು ಒದಗಿಸಿಕೊಟ್ಟ ಶ್ರೀ ಎಂ.ಶಿವಕುಮಾರ್ ಅವರಿಗೂ ನಾನು ಕೃತಜ್ಞ .
No comments:
Post a Comment