ಜಂಬಣ್ಣ ಅಮರಚಿಂತ ಅವರ ಹೊಸ ಪುಸ್ತಕದ ಅವಲೋಕನ
ಹರ್ಷಕುಮಾರ್ ಕುಗ್ವೆ
ಒಂದೆಡೆ ರಜಾಕಾರರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿಯುತ್ತಿದ್ದಂತೆ, ಧರ್ಮದ್ವೇಷಿಗಳ ದೌರ್ಜನ್ಯಗಳಿಗೆ ಒಳಗಾಗಿ ಸಾಯುವ ಪರಿಸ್ಥಿತಿ ತಲುಪಿದ ಗೋಪಾಲಸಿಂಗ್‌ನಂತಹವರ ಜೀವರಕ್ಷಣೆಯ ಕಾರ್ಯದಲ್ಲಿ ಮದರ್‌ಸಾಬುನಂತಹ ಮನುಷ್ಯರು ತಮ್ಮ ಜೀವವನ್ನೂ ಒತ್ತೆ ಇಡುವ ಧೈರ್ಯ ತೋರುತ್ತಾರೆ
ದೇಶದ ಚರಿತ್ರೆಯ ಈ ಕಾಲಘಟ್ಟವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕವಿ, ಕೃತಿಕಾರ ಜಂಬಣ್ಣ ಅಮರಚಿಂತ ಅವರು ರಚಿಸಿರುವ ಕಾದಂಬರಿ ಬೂಟುಗಾಲಿನ ಸದ್ದು. ನಿಜ. ರಜಾಕಾರರ ಬೂಟುಗಾಲಿನ ಸದ್ದುಗಳನ್ನು ಹಾಗೂ ಅದರಡಿ ಅಮಾಯಕರ ನರಳಾಟದ ಆರ್ತನಾದವನ್ನು ಈ ಕಾದಂಬರಿ ಸಶಕ್ತವಾಗಿ ಚಿತ್ರಿಸುತ್ತದೆ. ರಾಯಪುರದ ಮಕ್ತಲ್ ಪೇಟೆಯ ಒಂದು ಅಗಸರ ಕುಟುಂಬದ ದಂಪತಿಗಳಾದ ರಂಗಪ್ಪ, ಮಂಗಮ್ಮ ಹಾಗೂ ಇವರ ಮಗ ನಲ್ಲಜೋಮರನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯ ಕತೆ ಸಾಗುತ್ತದೆ.
ಭೂಮಾಲೀಕ ದರೂರು ರಾಮಿರೆಡ್ಡಿಯ ಬಳಿ ಸಾಲಗಾರನಾದ ರಂಗಪ್ಪನ ಕುಟುಂಬ ಒಂದೆಡೆ ಭೂಮಾಲೀಕನ ಬೆದರಿಕೆಯಿಂದ ಬಳಲಿ ಹೋಗಿದ್ದರೆ ಮತ್ತೊಂದೆಡೆ ರಜಾಕಾರರ ಕಿರುಕುಳಗಳಿಗೆ ಈಡಾಗುತ್ತದೆ. ಈ ನಡುವೆ ರಜಾಕಾರರ ದೌರ್ಜನ್ಯದ ವಿರುದ್ಧವಿದ್ದ ಜನರ ಆಕ್ರೋಶ ಭುಗಿಲೇಳುವ ಸೂಚನೆಗಳು ಕಾಣುತ್ತಿರುತ್ತವೆ. ಕೆಲ ಕಾಂಗ್ರೆಸ್ ಪುಡಾರಿಗಳೂ, ಆರ್ಯಸಮಾಜದವರೂ ಸ್ಥಳೀಯ ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿರುತ್ತಾರೆ. ಈ ನಡುವೆ ಹಿಂದೂ ಮುಸ್ಲಿಂ ಇಬ್ಬರಿಂದಲೂ ಒಳ್ಳೇ ವ್ಯಕ್ತಿ ಎಂದು ಕರೆಸಿಕೊಳ್ಳುವ ಮದರ್‌ಸಾಬ್ ಮಾನವತೆಯ ಸಾಕಾರಮೂರ್ತಿಯಾಗಿ ಕಷ್ಟದಲ್ಲಿರುವವರಿಗೆ ನೆರವಾಗುತ್ತಾ ಇರುತ್ತಾನೆ. ರಜಾಕಾರರ ವಿರುದ್ಧ ಯಾರೊಬ್ಬರೂ ಬಾಯಿ ಬಿಡದ ಪರಿಸ್ಥಿತಿಯಲ್ಲಿ ಮುಬಾರಕ್ ಎನ್ನುವ ಹುಚ್ಚು ಬಾಲಕ ತೊಬಾಕ್ ತೇಕ್ ಸಿಂಗ್ ಕತೆಯ ಹುಚ್ಚರ ಶೈಲಿಯಲ್ಲಿ ಮರವೊಂದನ್ನು ಹತ್ತಿ ತಿರಂಗಿ ಝಂಡಾ ಏರಿಸಿಯೇ ಸಿದ್ಧ ಎಂದು ಬೋಲೋ ಭಾರತ್ ಮಾತಾ ಕೀ ಜೈ, ಮಹಾತ್ಮ ಗಾಂಧೀಜೀ ಕೀ ಜೈ ಎಂದು ಎಲ್ಲರ ಕಂಗೆಡಿಸಿ ಅವನು ಕಾಲಿಟ್ಟ ಟೊಂಗೆ ಮುರಿದು ಪ್ರಾಣ ಕಳೆದುಕೊಳ್ಳುತ್ತಾನೆ.
ಒಂದೆಡೆ ರಜಾಕಾರರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿಯುತ್ತಿದ್ದಂತೆ, ಧರ್ಮದ್ವೇಷಿಗಳ ದೌರ್ಜನ್ಯಗಳಿಗೆ ಒಳಗಾಗಿ ಸಾಯುವ ಪರಿಸ್ಥಿತಿ ತಲುಪಿದ ಗೋಪಾಲಸಿಂಗ್‌ನಂತಹವರ ಜೀವರಕ್ಷಣೆಯ ಕಾರ್ಯದಲ್ಲಿ ಮದರ್‌ಸಾಬುನಂತಹ ಮನುಷ್ಯರು ತಮ್ಮ ಜೀವವನ್ನೂ ಒತ್ತೆ ಇಡುವ ಧೈರ್ಯ ತೋರುತ್ತಾರೆ. ಯಾವಾಗ ನಿಜಾಮನ ಸೈನ್ಯದ ಮೇಲೆ ಭಾರತದ ಸೈನ್ಯ ಮುಗಿಬೀಳುತ್ತದೆಯೋ ಆಗ ಪರಿಸ್ಥಿತಿ ಉಲ್ಟಾ ಆಗಿ ಯಾವ ಪಾಪವನ್ನೂ ಮಾಡದ ಮುಸಲ್ಮಾನರ ಮಾನ, ಪ್ರಾಣ, ಆಸ್ತಿ ಪಾಸ್ತಿಗಳು ಬಲಿಯಾಗುತ್ತವೆ. ಮಾನವ ಪ್ರೇಮದ ಸಂಕೇತವಾದ ಮದರ್‌ಸಾಬರ ಮನೆ ಅಂಗಡಿಗಳೂ ಲೂಟಿಕೋರರ ಪಾಲಾಗುವ, ಇದನ್ನು ಕಂಡು ಹತಾಶೆಗೊಳ್ಳುವ ಮದರ್ ಸಾಬ್ ಧರೆಗುರುಳುವ ಚಿತ್ರಣಗಳು ಮನಸ್ಸನ್ನು ಕದಡುತ್ತವೆ.
ಹೀಗೆ ಬೂಟುಗಾಲಿನ ಸದ್ದು ದೇಶದ ಒಂದು ಪ್ರಮುಖ ಚಾರಿತ್ರಿಕ ಸಂದರ್ಭವು ನಮ್ಮ ನಾಡಿನಲ್ಲಿ ಧ್ವನಿತವಾದ ಬಗೆಯನ್ನು ಉತ್ತಮವಾಗಿ ಕಟ್ಟಿಕೊಡುತ್ತದೆ. ಅಲ್ಲಲ್ಲಿ ಚರಿತ್ರೆಯ ಕೆಲವು ಘಟನೆಗಳನ್ನು ವಿವರಿಸುವಾಗ ಆ ವಿವರಗಳು ಕಾದಂಬರಿಯ ಚೌಕಟ್ಟನ್ನು ಮೀರಿರುವುದು, ಹಾಗೂ ಕೆಲವು ಉಪ ಶೀರ್ಷಿಕೆಗಳು ಸಹ ಹಾಗಿರುವುದು ಕೃತಿಯ ಕಾದಂಬರಿಯ ಕಲಾತ್ಮಕತೆಗೆ ತೊಡಕಾಗಿವೆ. ಕಾದಂಬರಿಗೆ ಮುನ್ನುಡಿಯಾಗಿ ಡಾ. ಅಮರೇಶ ನುಗಡೋಣಿಯವರು ನೀಡಿರುವ ಚರಿತ್ರೆಯ ಹಿನ್ನೆಲೆ ಸಹಕಾರಿಯಾಗಿದೆ ಎನ್ನಬಹುದು
No comments:
Post a Comment