ಪುಸ್ತಕ ಪ್ರೇಮಿಗಳಿಗೆ ಸಿಹಿ ಸುದ್ದಿಯ ಸಿಂಚನ. ಕನ್ನಡದ ಹಲವು ಹಿರಿಯ ಸಾಹಿತಿಗಳ ಸಮಗ್ರ ಗದ್ಯ, ನಾಟಕಗಳು ಇನ್ನು ಕೆಲವೇ ದಿನಗಳಲ್ಲಿ ಪುಸ್ತಕದ ಅಂಗಡಿಗಳಲ್ಲಿ ದೊರೆಯಲಿವೆ. ಅಲ್ಲದೆ, ಕನ್ನಡ ಪುಸ್ತಕಗಳ ಕುರಿತು ಅಭಿರುಚಿ ಮೂಡಿಸುವ ಉದ್ದೇಶದಿಂದ `ನನ್ನ ಮೆಚ್ಚಿನ ಪುಸ್ತಕ` ಉಪನ್ಯಾಸ ಮಾಲೆ ಬೆಂಗಳೂರಿನ ಆಯ್ದ ಕಾಲೇಜುಗಳಲ್ಲಿ ಆರಂಭವಾಗಲಿದೆ
ಕನ್ನಡದ ಖ್ಯಾತ ಸಾಹಿತಿಗಳ ಆಯ್ದ ಕೃತಿಗಳನ್ನು ಬ್ರೈಲ್ ಲಿಪಿಗೆ ಅಳವಡಿಸುವ ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವದ ಕಾರ್ಯ ಮುಗಿದಿದ್ದು ಇದೇ 26ರಂದು 15 ಪುಸ್ತಕಗಳು ಬಿಡುಗಡೆಯಾಗಲಿವೆ. ವೈದ್ಯಕೀಯ ಸಾಹಿತ್ಯ ಮಾಲೆಯಡಿ ಇನ್ನೂ 25 ಪುಸ್ತಕಗಳು ಓದುಗರ ಕೈಸೇರಲು ಸಿದ್ಧವಾಗಿವೆ.
ಈ ಕುರಿತು `ಪ್ರಜಾವಾಣಿ`ಗೆ ಮಾಹಿತಿ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಅವರು, ಡಾ.ಚಂದ್ರಶೇಖರ ಕಂಬಾರರ ಎಲ್ಲ ನಾಟಕಗಳನ್ನು ಒಳಗೊಂಡಿರುವ ಪುಸ್ತಕ, ಎಚ್.ಎಸ್. ಶಿವಪ್ರಕಾಶ್ ಅವರ ಸಮಗ್ರ ನಾಟಕಗಳು, ಪು.ತಿ. ನರಸಿಂಹಾಚಾರ್ ಅವರ ಸಮಗ್ರ ಗದ್ಯ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿವೆ ಎಂದು ತಿಳಿಸಿದರು.
ತಿ.ನಂ. ಶ್ರೀಕಂಠಯ್ಯ ಅವರ ಸಮಗ್ರ ಗದ್ಯದ ಪುನರ್ ಮುದ್ರಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಸುಜನಾ ಅವರ ಆಯ್ದ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕು ಎಂಬ ತೀರ್ಮಾನವನ್ನು ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾಗಿದೆ.
`ಕನ್ನಡ ಕಟ್ಟಿದವರು ಮಾಲೆ`ಯಡಿ 25 ಪುಸ್ತಕಗಳು ಬರಲಿವೆ. ಕನ್ನಡದ ಕಟ್ಟಾಳುಗಳಾದ ಬಿ.ಎಂ. ಶ್ರೀಕಂಠಯ್ಯ, ಮ. ರಾಮಮೂರ್ತಿ, ಕಂಬಳಿ ಸಿದ್ದಪ್ಪ, ಫ.ಗು. ಹಲಕಟ್ಟಿ, ಹುಯಿಲಗೋಳ ನಾರಾಯಣ ರಾಯರು, ಅ.ನ. ಕೃಷ್ಣರಾಯರು ಮುಂತಾದವರ ಕುರಿತು ಈ ಮಾಲೆಯಲ್ಲಿ ಪ್ರತ್ಯೇಕ ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.
ಈ ಮಾಲೆಯ 25 ಪುಸ್ತಕಗಳು ಅಕ್ಟೋಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿವೆ. ಒಟ್ಟು 100 ಪುಸ್ತಕಗಳನ್ನು ಈ ಮಾಲೆಯಡಿ ತರುವ ಉದ್ದೇಶ ಪ್ರಾಧಿಕಾರದ್ದು ಎಂದರು.
ವೈದ್ಯಕೀಯ ಸಾಹಿತ್ಯ: ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ತರಬೇಕು ಎಂಬ ಉದ್ದೇಶದಿಂದ ಚಾಲನೆ ನೀಡಲಾದ `ವೈದ್ಯಕೀಯ ಸಾಹಿತ್ಯ ಮಾಲೆ`ಯಡಿ ಇನ್ನೂ 25 ಪುಸ್ತಕಗಳು ಸಿದ್ಧವಾಗಿವೆ. ಇವುಗಳನ್ನೂ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ನನ್ನ ಮೆಚ್ಚಿನ ಪುಸ್ತಕ`: ಮೈಸೂರು, ಗದಗ, ಸಿಂಧಗಿ, ಜಮಖಂಡಿ, ಗುಲ್ಬರ್ಗ ಪ್ರದೇಶಗಳಲ್ಲಿ ಈಗಾಗಲೇ ಆರಂಭವಾಗಿರುವ `ನನ್ನ ಮೆಚ್ಚಿನ ಪುಸ್ತಕ` ಉಪನ್ಯಾಸ ಕಾರ್ಯಕ್ರಮವನ್ನು ಸೆಪ್ಟೆಂಬರ್‌ನಿಂದ ಬೆಂಗಳೂರಿನಲ್ಲೂ ಆರಂಭಿಸಲಾಗುವುದು. ನಗರದ ನ್ಯಾಷನಲ್ ಕಾಲೇಜು, ಜೈನ್ ಕಾಲೇಜು, ಕ್ರೈಸ್ಟ್ ಕಾಲೇಜು ಸೇರಿದ ಂತೆ ಕೆಲವು ಕಾಲೇಜುಗಳ ಕನ್ನಡ ವಿಭಾಗದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುವುದು.
26ರಂದು ಬಿಡುಗಡೆಯಾಗಲಿರುವ ಬ್ರೈಲ್ ಲಿಪಿಯ ಪುಸ್ತಕಗಳು...
ಮಲೆನಾಡಿನ ಚಿತ್ರಗಳು, ಪಕ್ಷಿಕಾಶಿ (ಕುವೆಂಪು), ಚೋಮನ ದುಡಿ (ಶಿವರಾಮ ಕಾರಂತ), ನಾದಲೀಲೆ, ಸಖಿಗೀತ (ದ.ರಾ. ಬೇಂದ್ರೆ), ಸೂರ್ಯನ ಕುದುರೆ ಮತ್ತು ಇತರ ಕಥೆಗಳು (ಯು.ಆರ್. ಅನಂತಮೂರ್ತಿ), ತುಘಲಕ್ (ಗಿರೀಶ ಕಾರ್ನಾಡ್), ಪರಿಸರದ ಕತೆ (ಕೆ.ಪಿ. ಪೂರ್ಣಚಂದ್ರ ತೇಜಸ್ವಿ).
ಸಂಧ್ಯಾರಾಗ (ಅನಕೃ), ಮೈಸೂರು ಮಲ್ಲಿಗೆ (ಕೆ.ಎಸ್. ನರಸಿಂಹಸ್ವಾಮಿ), ಮಂಕುತಿಮ್ಮನ ಕಗ್ಗ (ಡಿ.ವಿ.ಜಿ.), ಗರತಿಯ ಹಾಡು (ಹಲಸಂಗಿ ಗೆಳೆಯರು), ಟೊಳ್ಳುಗಟ್ಟಿ (ಟಿ.ಪಿ. ಕೈಲಾಸಂ), ಜೀವಧ್ವನಿ (ಚನ್ನವೀರ ಕಣವಿ), ಕಲ್ಲು ಸಕ್ಕರೆ ಕೊಳ್ಳಿರೊ (ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ). ಬ್ರೈಲ್ ಲಿಪಿಯ ಪುಸ್ತಕಗಳ ತಲಾ 31 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಒಂದೊಂದು ಪ್ರತಿಗೂ 1,500 ರೂಪಾಯಿ ವೆಚ್ಚವಾಗಿದೆ. ಇಡೀ ಯೋಜನೆಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಸಿದ್ಧಲಿಂಗಯ್ಯ ತಿಳಿಸಿದರು.
Subscribe to:
Post Comments (Atom)
No comments:
Post a Comment