ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಲಲಿತಾ ಸಿದ್ಧಬಸವಯ್ಯ ಅವರು ಬರೆದ ಟಿಪ್ಪಣಿ.
-ಲಲಿತಾ ಸಿದ್ಧಬಸವಯ್ಯ.
`ಹಳದಿ ಚಿಟ್ಟೆ’ ಮತ್ತು `ಪೀನಿ ಹೂ ‘ ಎರಡನ್ನು ಓದಿದೆ. `ಪೀನಿ ಹೂ ‘ ಹೆಚ್ಚು ನಿಗದ ಓದನ್ನು ಡಿಮ್ಯಾಂಡ್ ಮಾಡುವ ಪುಸ್ತಕ. ನಾನಿದನ್ನು ಮತ್ತೆ ಓದಬೇಕಾಗಿದೆ, ನನಗೆ ದಕ್ಕಲು. ಬೇರೆ ನೆಲದಿಂದ ಕಿತ್ತು ತಂದ ಗಿಡವನ್ನು ಹೊಸ ಮಣ್ಣಿಗೆ ಹೊಂದಿಸಲು ವಿಶೇಷ ಗಮನ ಕೊಡುವ ಹಾಗೆ ಅನುವಾದಗಳನ್ನು ಅವಕ್ಕೆ ಸಲ್ಲಬೇಕಾದ ಮಯರ್ಾದೆಯೊಂದಿಗೇ ಓದಬೇಕು, ಸದರ ವಹಿಸುವಂತಿಲ್ಲ ! ಇದರಲ್ಲಿ ಕೆಲವನ್ನು ಅನಿಕೇತನದಲ್ಲಿ ಓದಿದ್ದೆ. ಅನುವಾದದ ದಿಗ್ಗಜ ಎನಿಸಿಕೊಂಡಿರುವ ನಿಮ್ಮ ಈ ಕೆಲಸದ ಬಗ್ಗೆ ಆತುರವಾಗಿ ಏನನ್ನಾದರೂ ಹೇಳಹೊರಡುವುದು ಅನುಚಿತವಾದೀತು.ಹಳದಿ ಚಿಟ್ಟೆ , ಬಹು ದಿನದ ನಂತರ ಒಂದಕ್ಷರ ಬಿಡದೆ ಓದಿದ ಪುಸ್ತಕ. ಇದರ ಎಲ್ಲ ಪದ್ಯಗಳನ್ನೂಆಸಕ್ತಿಯಿಂದ ಓದಿ ಮುಗಿಸಿದೆ. ಸಂಕಲನದ ಅನೇಕ ಪದ್ಯಗಳು ಇಷ್ಟವಾದವು. ಒಂದು ಬರಹ ನಮಗೆ ಇಷ್ಟವಾಗುವುದಕ್ಕೆ ನಮ್ಮೊಳಗಿನ ಮಾನಸಿಕ ಸಂರಚನೆಯೇ ಕಾರಣವಿರಬೇಕು. ಅದಕ್ಕೆ ರುಚಿಸುವುದನ್ನು ಅದು ತಕ್ಷಣ ಒಪ್ಪಿಕೊಳ್ಳುತ್ತದೆ. ನನಗೆ ಸಂಕಲನದ ಇನ್ ಬಾಕ್ಸುಗಳು, ಸಂದಿಗ್ಧ, ಹಾರುತ್ತ ಬಂದಿಳಿದ ಹಕ್ಕಿ, ಅಜ್ಜಿಗೆ ಏಕೆ ದುಃಖವಾಗಿಲ್ಲ, ಹಬ್ಬದ ದಿನ, ರಾಮಚಂದ್ರರ ನೆನಪು, ಹೊಸಮನೆ ಕಪ್ಪೆ……., ಇಪ್ಪತ್ತೈದು ವರ್ಷದ ಹಿಂದಣ ಯಾತ್ರೆ, ಎರಡು ಹಕ್ಕಿಗಳು, ವಿಲ್ ಬರೆದ ದಿನ, ಹಬ್ಬದ ದಿನದ ತಾಯಿ, ಸೂಳೆಮನೆ, ಒಳಗಿಂದ ಒಂದು ನಿಃಶ್ವಾಸ…, ಧರ್ಮ ಚಕ್ರ, ವೃದ್ಧಾಶ್ರಮದಲ್ಲಿ , ಆಸ್ಪತ್ರೆಯ ಮುಂದೊಷ್ಟು ಜನ, ಈ ಪದ್ಯಗಳು ಬಹಳ ಇಷ್ಟವಾದುವು.
ಇವೇ ಯಾಕಿಷ್ಟ ಎಂದುಕೊಂಡರೆ ನಾನೂ ಹೀಗೆ ದಿನನಿತ್ಯಗಳನ್ನೆ ಪದ್ಯವಾಗಿಸುವುದು ಹೆಚ್ಚು! ಮತ್ತು ಅದಕ್ಕಿಂತ ಮುಖ್ಯವಾದದ್ದು ಕವಿಯಾಗಿ ಗೆಲ್ಲುವುದು ನೀವು ಈ ಪದ್ಯಗಳಲ್ಲೆ ಎಂದು ನನ್ನ ಎಣಿಕೆ. ಚಿಕ್ಕ ಸಂಗತಿಗಳು, ಘಟನೆಗಳು, ಹಠಾತ್ತನೆ ಹೊಳೆದ ಒಂದು ಭಾವ, ಒಂದು ಭೇಟಿ ಇಂಥವುಗಳನ್ನು ನೀವು ಪದಗಳಲ್ಲಿ ಚಿತ್ರವತ್ತಾಗಿ ಕಟ್ಟಿಕೊಡಬಲ್ಲಿರಿ. ಅವುಗಳೊಳಗಿನ ನಾಟಕೀಯತೆ ಗುಣದಿಂದಾಗಿ ಅವು ನಮ್ಮೊಳಗೆ ಮರು ನಿಮರ್ಾಣವಾಗುತ್ತವೆ. ಈ ನಿಮರ್ಿತಿಯ ನಿಮರ್ಿತಿಯೇ ಆ ಪದ್ಯವನ್ನು ನಮಗೆ ಇಷ್ಟಗೊಳಿಸುತ್ತದೆಯೆಂದು ತೋರುತ್ತದೆ. ಹೀಗೆ ನನ್ನೊಳಗೆ ಇಳಿದು ಸಂವಹನವನ್ನು ಪ್ರಫéುಲ್ಲಗೊಳಿಸಿದ ಮೇಲಿನ ಪದ್ಯಗಳಲ್ಲೆಲ್ಲ ಹಬ್ಬದ ದಿನದ ತಾಯಿ ಮತ್ತು ವೃದ್ಧಾಶ್ರಮ ನನಗೆ ವಿಶೇಷ ಇಷ್ಟವಾದುವು. ಈ ಪದ್ಯಗಳನ್ನು ನಾನು ಮತ್ತೆ ಮತ್ತೆ ಓದಿದೆ.
ದಡವಿಲ್ಲದ ಸಾಗರ, ಸಮತಾಳಿಗೊಂದು, ನೆಯಿಗೆ, ಮಾಯದ ಮೋಡಿ, ನೀರುಕುಡಿಯಲು ಬಂದ ನಾಯಿ ಇವು ಬುದ್ಧಿಯ ಕೈ ಮೇಲಾದ ರಚನೆಗಳಾದರೂ ಅವುಗಳ ತಾಕರ್ಿಕತೆಯಿಂದ ಸೆಳೆಯುತ್ತವೆ.
ಪದ್ಯಗಳಲ್ಲಿ ನನಗೆ ಪ್ರಿಯವಾದ ಸಾಲುಗಳನ್ನು ಅಪರೂಪ ಎನಿಸಿದ ರೂಪಕಗಳನ್ನು( ಉದಾ; ಮೊದಲು ಕೊಳಕ್ಕೆ ಕಲ್ಲು ಬೀರಿ ಬಿಂಬ ಹುಡುಕಲು ಬಳಿಕ ಯತ್ನಿಸುವುದು, ಹಕ್ಕಿ ಕೂಗಿಗೂ ಮೊದಲೆ ತಾವು ಸೇರಿ ತನ್ನ ಕೊರಳಿಗೆ ತಾನೇ ಕೇಳುಗನಾಗುವುದು ) ಗುರುತು ಮಾಡಿದ್ದೇನೆ. ಇದು ಮೊದಲ ಓದಿನ ನನ್ನ ಅನಿಸಿಕೆ.
ಕನ್ನಡ ಬರಹ ಕ್ಷೇತ್ರದಲ್ಲಿ ಎಲ್ಲ ರೀತಿಯಲ್ಲು ಗಟ್ಟಿನೆಲೆಯಲ್ಲಿ ಗುರುತಿಸಿಕೊಂಡಿರುವ ನೀವು ನನಗೆಪುಸ್ತಕ ಕಳುಹಿಸಿ ನನ್ನಿಂದ ಅಭಿಪ್ರಾಯ ಕೇಳಿದ್ದಕ್ಕೆ ನಾನು ಆಭಾರಿ.
No comments:
Post a Comment