ಇದು ಕವಿ ಚಂದ್ರಶೇಖರ ತಾಳ್ಯರ ಐದನೆಯ ಕವನ ಸಂಕಲನ. ಬಂಡಾಯ ಪರಂಪರೆಯಲ್ಲಿ ಬೆಳೆದು ಬಂದ ಇವರ ಮೊದಲ ಸಂಕಲನ `ನನ್ನ ಕಣ್ಣಗಲಕ್ಕೆ` ಸ್ವಾಭಾವಿಕ ಆಕ್ರೋಶದ ಹೊರತಾಗಿಯೂ ಕಲಾತ್ಮಕ ಹಾಗೂ ಸ್ವಂತಿಕೆಯ ಸಾಧ್ಯತೆಗಳತ್ತ ಚಿಂತಿಸಿತ್ತು.
`ಸಿಂಧೂ ನದಿಯ ದಂಡೆಯ ಮೇಲೆ` ಎಂಬ ಎರಡನೆಯ ಸಂಕಲನವು ಆಧುನಿಕ ಮತ್ತು ಅನುಭಾವಿಕ ಪ್ರೇರಣೆಗಳಲ್ಲಿ ವಿಶ್ವವನ್ನೇ ಪರಿಭಾವಿಸುವ ಉತ್ಸಾಹ ಹೊಂದಿತ್ತು. `ಸುಡುವ ಭೂಮಿ` ಎಂಬ ಮೂರನೆಯ ಸಂಕಲನವು ತಾಳ್ಯರ ಮಾಗಿದ ಚಿಂತನೆ, ಗಟ್ಟಿ ಶಿಲ್ಪ, ಗಂಭೀರ ಪ್ರಯತ್ನಗಳಿಂದ ಪ್ರಾತಿನಿಧಿಕವೆಂಬಂತೆ ಬದಲಾಯಿತು.
ತಮ್ಮ ನಾಲ್ಕನೆಯ ಸಂಕಲನ `ಎಲ್ಲಿ ನವಿಲು ಹೇಳಿರೇ` ಬರುವಷ್ಟರಲ್ಲಿ ತಾಳ್ಯರ ಕಾವ್ಯ ಧೋರಣೆಗಳು ಬೇರೆಯಾಗಿದ್ದವು. ಅವರು ಭಾವ ಮತ್ತು ಗೇಯ ಗುಣಗಳ ಮೂಲಕ ಜೀವನ ಪ್ರೀತಿಯನ್ನು ಅರಸತೊಡಗಿದರು. ಈ ಬದಲಾವಣೆಯೇ ಅಂತಿಮವೇನೋ ಎಂದು ಭಾವಿಸುವಷ್ಟರಲ್ಲಿ ಅದರಿಂದ ಹೊರಬರುವ ಆದರೆ ಹೊರಬರಲು ಪೂರ್ಣ ಸಮ್ಮತವಿಲ್ಲದ ಒಂದು ಸಂದಿಗ್ಧ ತೊಳಲಾಟದಲ್ಲಿ ತಮ್ಮ `ಕಾವಳದ ಸಂಜೆಯಲ್ಲಿ` ಎಂಬ ಐದನೆಯ ಕವನ ಸಂಕಲನ ಹೊರತಂದಿದ್ದಾರೆ.
ಕವಿಯೊಬ್ಬ ಹೊರಳುವಿಕೆ ಮತ್ತು ಬದಲಾವಣೆಗಳಿಗಾಗಿ ಕಾತರಿಸುವುದು ಸಹಜವೆನಿಸಿದರೂ ತನ್ನ ಕಾವ್ಯ ಸತ್ವವನ್ನು ಸತತವೂ ಅನುಮಾನಿಸಬೇಕಿಲ್ಲ. ಆದರೆ ಹಳತಿನ ಸಂದೇಹ ಮತ್ತು ಹೊಸತಿನ ಪ್ರೀತಿಯ ಮುಗ್ಧ ಮತ್ತು ವಿಪರೀತ ನಂಬುಗೆಗಳಿಂದಾಗಿ ತಾಳ್ಯ ತಮ್ಮ ಕಸುಬುಗಾರಿಕೆಯನ್ನು ಬಲವಂತದ ಅಗ್ನಿದಿವ್ಯಕ್ಕೆ ಸದಾ ಒಡ್ಡಿಕೊಂಡಿದ್ದಾರೆ. ಪ್ರಸ್ತುತ ಸಂಕಲನ ಅದರ ರೂಪವಾಗಿದೆ. ಪ್ರಯೋಗಶೀಲತೆ ಮತ್ತು ಪರಿವರ್ತನಾ ಹಂಬಲವು ವೇಗದ ಪ್ರಯತ್ನವಾದಾಗ ಅದು ಉಂಟುಮಾಡುವ ಸೃಜನಾತ್ಮಕ ತಲ್ಲಣಗಳ ಛಾಯೆಯಂತೆ ಈ ಕವಿತೆಗಳಿವೆ.
ಚಂದ್ರಶೇಖರ ತಾಳ್ಯ ತಮ್ಮ ಕವಿತೆಗಳ ತಾತ್ವಿಕತೆಯನ್ನು ಪ್ರಧಾನವಾಗಿ ಕಟ್ಟಿಕೊಂಡಿರುವುದು ವಚನ ಚಳವಳಿಯ ಪ್ರಭಾವದಲ್ಲಿ. ಅದಕ್ಕೆ ತಕ್ಕಂತೆ ಭಾಷೆಯನ್ನು ರೂಪಕಾತ್ಮಕವಾಗಿ ಬಳಸುವುದು ಅವರ ಶಕ್ತಿ. ಆಗಾಗ ಅದಕ್ಕೆ ನಾಟಕೀಯ ಲಯಗಳನ್ನು ಜೋಡಿಸಿ ಅದರ ವಿನ್ಯಾಸಗಳಲ್ಲಿ ಪರಿಣಾಮದ ಸೊಲ್ಲನ್ನು ತೀವ್ರ ಕಾಳಜಿಯಿಂದ ಹುಡುಕುತ್ತಾರೆ. ಅವರ ಮುಂದೆ `ಸ್ವಪ್ನ ಪ್ರತಿಮೆಯ ಎರಕ`ವೊಂದಿದೆ.
(ಕುಲುಮೆಯ ಹಾಡು) ಅದರ ಹುಡುಕಾಟ ಸುಲಭವಲ್ಲ. ಹೊರಗಿನ ಜಗತ್ತು ಕ್ಷೋಭೆಗೊಳಗಾಗಿದೆ. ಅಂತರಂಗದ ಜಗತ್ತು ಆತ್ಮವಂಚನೆಯಿಂದ ಕೂಡಿದೆ. ಅದಕ್ಕೆ ಕತ್ತಲೆಯು ಮುಸುಕಿದೆ. ಬೆಳಕಿಗಾಗಿ ಕಾತರಿಸುತ್ತಲೇ ಬಂದರೂ ಈಗ ನಿಂತಿರುವುದು ಕಾವಳದ ಸಂಜೆಯಲ್ಲಿ.
ವೈಯಕ್ತಿಕತೆಯ ದೂಳು ಕೊಡವಿ ಸಮುದಾಯದ ಸಂಕಟವನ್ನು ಪರಿಭಾವಿಸಬೇಕೋ ಇಲ್ಲವೇ ಸಮುದಾಯದ ನೋವುಗಳಲ್ಲಿ ವೈಯಕ್ತಿಕತೆಯನ್ನು ದೂಡಬೇಕೋ ಎಂಬ ತಹತಹಿಕೆಯಲ್ಲಿ `ಸಹಗಮನ` ಎಂಬ ದಾಂಪತ್ಯಗೀತ ಮೈದಾಳಿರುವಂತೆ `ಕಲ್ಯಾಣವತ್ತಲೇ` ಎಂಬಂತಹ ವ್ಯಾಪ್ತ ರಚನೆಯೂ ಈ ಸಂಕಲನದಲ್ಲಿ ಸಾಧ್ಯವಾಗಿದೆ. ಈ ಎರಡು ಬಗೆಯ ಶೋಧದಲ್ಲಿ ಕವಿಯ ತಾದಾತ್ಮ್ಯವನ್ನು ಹೀಗೆ ಕಾಣಬಹುದು.
ಗುಡುಗು ಸಿಡಿಲಿನ ನುಡಿಕೊಂದ; ಸ್ಪಟಿಕದುಸಿರು
ಎಲ್ಲಿ ಅಡಗಿದ್ದಾನೆ ಕೂಡಲ ಸಂಗಮ
ಯಾವ ಕದಳಿಯ ಹೊಕ್ಕ್ದ್ದಿದಾನೆ ಚನ್ನಮಲ್ಲಿಕಾರ್ಜುನ
ಜೋಳಿಗೆಯ ಪವಾಡಕ್ಕೆ ಮುದುರಿಕೊಂಡನೇ ಜಂಗಮ
ಆವಾವ ಸ್ಥಲದಲ್ಲೂ ಸ್ಥಾವರ ಕಳಶ ವಿಜೃಂಭಣ
.... .... .... .... .... .... .... ....
ಹಿಡಿವ ಕೈಯ ಮೇಲೆ ಕತ್ತಲೆ, ನೋಡುವ ಕಂಗಳ ಮೇಲೆ ಕತ್ತಲೆ
ಕಲ್ಯಾಣವತ್ತಲೇ, ಕಲ್ಯಾಣವತ್ತಲೇ, ಕಲ್ಯಾಣವತ್ತಲೇ
ಕತ್ತಲೆ ಎಂಬ ವಾಸ್ತವ ಹಾಗು ಕಲ್ಯಾಣ ಎಂಬ ಗಮ್ಯವನ್ನು ಕಲ್ಯಾಣಕ್ರಾಂತಿಯ ಇತಿಹಾಸ ಮತ್ತು ಸಮಾಜ ಕಲ್ಯಾಣದ ವರ್ತಮಾನದಲ್ಲಿ ಯಶಸ್ವಿಯಾಗಿ ಇಟ್ಟು ನೋಡಿದ್ದಾರೆ. ಇದನ್ನು ಕವಿ `ಬಸವಣ್ಣ ತಂದ ಬಟ್ಟೆಯ ಗಂಟು` ಎಂಬ ಕವನದಲ್ಲಿ ಮತ್ತಷ್ಟು ಹರಿತವಾಗಿ ಪರೀಕ್ಷಿಸಿದ್ದಾರೆ. ಕೃಷ್ಣೆ ತನ್ನ ಒಡಲಲ್ಲಿ ಬಸವನನ್ನು ಕರಗಿಸಿಕೊಂಡಮೇಲೆ ಉಳಿದ ದಂಡೆಯ ಮೇಲಿನ ಬಟ್ಟೆಯ ಗಂಟು ಕವಿಗೆ ಕಾಲಗಳ ನಡುವಿನ ಒಂದು ಸಾಪೇಕ್ಷ ಸಂಕೇತವಾಗಿದೆ.
ತೀರದಿಂದೆದ್ದು ಬಂದು ಗಂಟು ಬಿಚ್ಚಲು
ಕಲ್ಯಾಣವೆಂಬ ಕಲ್ಯಾಣ ಗಂಟಿನೊಳಗವಿತು
ವಚನ ಲಕ್ಷದ ಲಕ್ಷ್ಯದಲ್ಲಿ ಚೂರಾದ ಗಣ
.... .... ...
ಗಂಟು ಕೈಯಲ್ಲಿ, ಗಂಟು ಗಂಟಿನ ಬುಗುಟು ತುದಿಯಲ್ಲಿ
ಈಗಲೀಗ ತಲೆ ತಗ್ಗಿಸಿದ ಬಸವ
ಕತ್ತಿ ಝಳಪಿಸುವ ಬಿಜ್ಜಳ
ಆ ಕಡೆ ಈ ಕಡೆ ಅದೇ ಅದೇ ದಳ
ಹರಿವ ಕೃಷ್ಣೆಯ ತಡೆಯಲೆ
ಮುಳುಗು ಬಸವನ ಮೇಲೆತ್ತಲೆ
ಗಂಟು
ಬಸವನೇ ಕಗ್ಗಂಟು
ಗಂಟು ಬಿಚ್ಚಿದರೆ ಹೀಗೆ
ಕಟ್ಟಿದರೆ ಭೂತದ ಹಾಗೆ
ಈ ವಸ್ತುನಿಷ್ಠ ಶೋಧಕ್ಕೆ ಪೂರಕವಾಗಿ ದುಡಿಯುವ ಇನ್ನೊಂದು ರಚನೆ `ಕುಲುಮೆಯ ಹಾಡುಗಳು`. ಇಲ್ಲಿ, `ಕಮ್ಮೋರ ಎಂಬ ಲೌಕಿಕ ಮತ್ತು ಕರ್ತಾರ` ಎಂಬ ಅಲೌಕಿಕದ ನಡುವಿನ ಗುದಮುರಿಗೆಯಿದೆ. ಸ್ವಪ್ನ ಪ್ರತಿಮೆಯ ಎರಕದಲ್ಲಿ ಏಕಾಂತವೂ ಲೋಕಾಂತವೂ ಸೂಚ್ಯವಾಗಿ ಮೇಳೈಸಿದೆ.
ಏಕಾಗ್ರತೆಗೆ ಭಂಗ, ಆಗಾಗ ತನ್ನದೇ ಕಣ್ಣ ಕಿಸುರು
ತನಗೆ ತಾನೇ ಸವಾಲಾಗುತ್ತಿದ್ದಾನೆ ಕಮ್ಮೋರ ಭೀಮಣ್ಣ
ಜಟೆ ಬಿಚ್ಚಿ ಕೊಡವಿದ್ದಾನೆ ಬೆನ್ನ ಹಿಂದೆ, ಲಟಿಗೆ ಮುರಿಯುತ್ತಾನೆ
ಸಿಡುಕಿ ಪುಡಿ ಪುಡಿ ಮಾಡಲೆಂಬಂತೆ ಅಪೂರ್ವದ ತನ್ನ ಎರಕವನ್ನೇ
`ಸಹಗಮನ` ಎಂಬ ನೀಳ್ಗವಿತೆಯ ದುಃಖ ಬೇರೆ ರೀತಿಯದು. ಇದು ಕನ್ನಡದ ಸಖೀಗೀತಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಲ್ಲಂತಹ ರಚನೆ. ಮನೆಯೊಳಗಿನ ಜೀವ ಸಂಬಂಧಗಳ ಎರಕದ ಹಾಡು ಮತ್ತು ಪಾಡುಗಳೆರಡನ್ನೂ ಒಳಗೊಂಡಿರುವ ಇಲ್ಲಿಯ ಕಥಾನಕವು ಸೊಗಸಾದ ಲಯ ಹೊಂದಿದೆ. ಕುಟುಂಬಕ್ಕೆ ಹೆದ್ದಾರಿಯ ಚರಿತೆಯಿರುವಂತೆ ಮಡಿಲ ದಾರಿಯೂ ಇದ್ದು ಇವುಗಳ ಸಮಾಯೋಜಕ ಹೆಣಿಗೆ ಮತ್ತು ಧೈರ್ಯಯುತ ನಡೆ ಇಲ್ಲಿಯ ಲಕ್ಷಣ. ಈ ಆಖ್ಯಾನದಲ್ಲಿ ಹಲವು ಮಿಡಿತದ ಪ್ರಶ್ನೆಗಳಿವೆ.
ಎಲ್ಲ ಸಂಜೆಯ ಹಾಡಿನಂತಲ್ಲವೀ ಸಂಜೆ ಹಾಡು
ಮುಂದೆ ಸಾಗರ ಬಿದ್ದ ಇರುಳಿನಂಥಾ ಪಾಡು
ಬಂಡಿ ಜಾಡನು ಬಿಟ್ಟು ಏಸು ಕಾಲವೋ ಏನೋ
ಹೆದ್ದಾರಿ ಚರಿತೆಗೋ ಯಾವುದ್ಯಾವುದು ಈಡು
ಮುಖ ಮರೆಸಿ ಕರಿ ಪರದೆ ರಂಗದಂಗಳದಲ್ಲಿ
ಜಗದ ದೀಪಗಳೆಲ್ಲ ಅದರ ಹಿಂದೆ
ಪರದೆ ಸರಿಯುವ ತನಕ ಕತ್ತಲೆಯ ಕೂಸುಗಳು
ನಾನು ಹೊಣೆಯೋ ನೀನು ಹೊಣೆಯೋ ನೆನಪೊಂದು ಮುಂದೆ
ಕಾಲ ಪರಿಪ್ರೇಕ್ಷ್ಯ ಮತ್ತು ಸಂಬಂಧ ಸೂಕ್ಷ್ಮಗಳನ್ನು ಅಮೂರ್ತವಾಗಿ ಆದರೆ ಪರಿಣಾಮಕಾರಿಯಾಗಿ ಹಿಡಿಯುವ `ಯಾವ ಚಿತ್ತದ ಮಳೆ`, ಕೆಲ ವಿಶಿಷ್ಟ ರೂಪಕಗಳ `ಭೂರಮೆಯ ಗಾನ`, `ಒಂಟಿ ದನಿಯ ಕೂಗು`, `ಕಾಯುವ ಕ್ರಿಯೆ` ಇಂತಹ ಕವಿತೆಗಳು ಗಮನ ಸೆಳೆಯುತ್ತವೆ.
ಇಷ್ಟಾಗಿಯೂ ತಾಳ್ಯರ ಸಮಸ್ಯೆಯಿರುವುದು ಸಂಕಲನದ ಬಹುತೇಕ ಕವನಗಳಲ್ಲಿ ಹಬ್ಬಿರುವ ಕಾವಳಕ್ಕೆ ತಕ್ಕ ನೆಲೆಯನ್ನು ತಾರ್ಕಿಕವಾಗಿ ಕಂಡುಕೊಳ್ಳದಿರುವಲ್ಲಿ ಮತ್ತು ಅವರ ಕಾವ್ಯ ಹಾಗೂ ರೂಪಕ ಮೂಲಗಳು ಸಮಕಾಲೀನ ಕಾವ್ಯದ ಹೊಸ ಬೆಳವಣಿಗೆಗಳನ್ನು ಆಸ್ಥೆಯಿಂದ ಕಾಣದಿರುವಲ್ಲಿ.
ಯಾರು ಮುರಿದರು ಕೈಯ ಯಾರು ಹರಿದರು ನಾಲಗೆ
ಯಾರು ಕೊಯ್ದರು ಕರುಳು ಕಿತ್ತು ಬಿಟ್ಟವರಾರು ಕಣ್ಣ
(ಕತ್ತಲೆ ಕತ್ತಲೆಯನೆ ದೂಡುತಿದೆ)
ಪ್ರಾತಃಕಾಲದ ಓ ರವಿ ಕಿರಣವೇ ಗರಿಕೆ ಮೇಲಿನ ಇಬ್ಬನಿಯ ತಣಿವೇ
ಹಕ್ಕಿ ಗೊರಲಿನ ಸೂಕ್ಷ್ಮ ಸಂಗೀತವೇ ಸಂಜೆಬಾನಿಗೆ ತಾರೆ ಎಸೆದ ಮಿನುಗೇ
ಧರೆಗಿಳಿದು ಧಗೆ ಕಳೆದ ಚಂದ್ರಮನ ಬೆಳಕೇ ಭುವನ ಕುಸುಮ ಪರಾಗವೇ
(ನಿನಗೆಂದು ಶಾಂತಿ)
ಇಗೋ ನಾನು ಸಂಪಿಗೆಯ ಹೂವಾಗುವೆ
ಮಾಮರದ ಹಾಡಾಗುವೆ
ಮೂಡುವ ಕಿರಣಗಳಲ್ಲಿ
ಮೂಸುವ ಮುಂಜಾವುಗಳಲ್ಲಿ
ಉಷೆಯ ಕನ್ನಡಿಯಲ್ಲಿ ಬೆಳಗುತ್ತಲೇ ಇರುವೆ
(ಮೇಲಧಿಕಾರಿಗೆ)
ಸಂಕಲನದುದ್ದಕ್ಕೂ ಇರುವ ಮೇಲುಸ್ತರದ ಇಂತಹ ಅನುರಣನ ತನ್ನ ರಮ್ಯ ತೋರಿಕೆಯನ್ನು ಸಾಬೀತುಪಡಿಸುವುದೇ ವಿನಾ ಕಾವ್ಯಕ್ಕೆ ಆಯಾಮ ತಂದುಕೊಡಬಲ್ಲ ಶಿಲ್ಪವಾಗುವುದಿಲ್ಲ. ಒಳಿತಾಗಲಿ ಕೆಡುಕಾಗಲಿ ಸಿದ್ಧ ಜೋಡಿಸುವಿಕೆಯಲ್ಲಿ ಮಾತಿಗೆ ಮಾತ್ರ ಕಟ್ಟುಬಿದ್ದಂತೆ ಎಷ್ಟೋ ಕಡೆ ಭಾಸವಾಗುತ್ತದೆ.
ಸಂಕಲನದ ಎರಡನೆಯ ಭಾಗದಲ್ಲಿರುವ ಪ್ರಕೃತಿಯ ಗೇಯ ಲಹರಿಗಳು ಲಾಲಿತ್ಯದಿಂದ ಗಮನ ಸೆಳೆದರೂ ಸ್ವಂತಿಕೆ ಮತ್ತು ಸಮೃದ್ಧತೆಯ ಹೊಸತನ ತೋರುವುದಿಲ್ಲ. ಮೂರನೆಯ ಭಾಗದ ವ್ಯಕ್ತಿಚಿತ್ರಗಳು ಸಂಕಲನದ ಧೋರಣೆ ಮತ್ತು ನಂಬಿಕೆಗಳ ಅಂತರ್ಗತ ಭಾವವಾಗುವುದಿಲ್ಲ.
ಇಂತಲ್ಲಿ ತಾವೇ ನಿರ್ಮಿಸಿಕೊಂಡ ಸೀಮಿತ ಆಕೃತಿಕಲ್ಪಗಳ ಮುಂದೆ ಪರಿಪರಿಯಾಗಿ ಕಾವ್ಯಾತ್ಮಕವಾಗಿ ನಿವೇದಿಸುವಂತೆ ಕಾಣುವ ಕವಿಯ ಕಾವ್ಯಶಕ್ತಿಯು ವಸ್ತು ಬಹುಳತೆ, ವ್ಯಾಪ್ತ ನಿರ್ವಹಣೆ ಮತ್ತು ತನ್ನದೇ ಆದ ಭಾಷೆಯೊಂದನ್ನು ಅಪೇಕ್ಷಿಸುವಂತೆ ತೋರುತ್ತದೆ. ಇದು ತಾಳ್ಯರು ಆಹ್ವಾನಿಸಿಕೊಂಡಿರುವ ಹೊಸ ತಲ್ಲಣ ಮತ್ತು ಸವಾಲು.
ಕಾವಳದ ಸಂಜೆಯಲ್ಲಿ
ಲೇ: ಚಂದ್ರಶೇಖರ ತಾಳ್ಯ
ಪು: 132; ಬೆ: ರೂ. 80
ಪ್ರ: ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
No comments:
Post a Comment