ಅಶೋಕವರ್ದನ ಅವರ ಬರೆಹಪ್ರಿಯ ವಿವೇಕ್ (ಶಾನಭಾಗ್) ಮತ್ತು (ಕೆ.ವಿ) ಅಕ್ಷರಾ,ದೇಶಕಾಲದ ಏಪ್ರಿಲ್ ಸಂಚಿಕೆಯ (೨೫ನೇದು) ಸಮಯಪರೀಕ್ಷೆ – ‘ಮಾರುಕಟ್ಟೆಯ ಒತ್ತಡ’, ತುಂಬಾ ಸಾಮಯಿಕ. ಅದನ್ನು ಪುಸ್ತಕೋದ್ಯಮಕ್ಕೆ ಮತ್ತೂ ಮುಖ್ಯವಾಗಿ ಕನ್ನಡ ಪುಸ್ತಕೋದ್ಯಮಕ್ಕೆ ಅನ್ವಯಿಸಿಕೊಂಡು ವಿಸ್ತರಿಸಲು ನನ್ನ ಅನುಭವ ಒತ್ತಾಯಿಸುತ್ತಿದೆ. ಆದರೆ ಹಾಗೆ ಬರೆದದ್ದನ್ನು ನಿಮಗೆ ಪ್ರತಿಕ್ರಿಯಾ ಲೇಖನವಾಗಿ ಕಳಿಸಿ ದೇಶಕಾಲದ ನಿರ್ವಹಣೆಯಲ್ಲಿ ‘ಮಾರುಕಟ್ಟೆಯ ಒತ್ತಡ’ ಬರದಂತೆ ಇಲ್ಲಿ ಪ್ರಕಟಿಸಿದ್ದೇನೆ. (ನಿಮ್ಮ ಐದನೇ ವರ್ಷದ ವಿಶೇಷ ಸಂಚಿಕೆ ಪ್ರಕಟವಾದಾಗ ಮತ್ತೆ ಪ್ರಜಾವಾಣಿ ಸಾಪ್ತಾಹಿಕಕ್ಕೆ ದೇಶಕಾಲ ಸಹಯೋಗ ಕೊಡಲು ಸುರು ಮಾಡಿದಾಗ ನಡೆದ ತಾತ್ತ್ವಿಕ ಮುಖವಾಡ ಹೊತ್ತು, ಜಾತಿ, ಪ್ರಾದೇಶಿಕ ಪ್ರಾತಿನಿಧ್ಯವೇ ಮುಂತಾದ ಸವಕಲು ಸಲಕರಣೆಗಳ ಜೊತೆ ಹೋರಾಡಿದ ಸ್ವಾರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಬರಬಾರದಲ್ಲಾ ಎಂಬ ಎಚ್ಚರ ಎಂದರೂ ಸರಿ.)
ಪುಸ್ತಕೋದ್ಯಮದಲ್ಲಿ ಪ್ರಕಾಶಕ (ಕನ್ನಡದಲ್ಲಿ ಒಮ್ಮೆಗೆ ಹೆಚ್ಚಾಗಿ ಒಬ್ಬನೇ), ಕೆಲವೊಮ್ಮೆ ವಿತರಕರು ತುಂಬಾ ಸಣ್ಣ ಸಂಖ್ಯೆಯಲ್ಲಿರುತ್ತಾರೆ ಮತ್ತು ಹೆಚ್ಚಾಗಿ ದೊಡ್ಡ ನಗರಗಳಲ್ಲಿ ಮಾತ್ರ ಸ್ಥಾಪಿತರಿರುತ್ತಾರೆ. ಆದರೆ ಗ್ರಾಹಕರ (ವ್ಯಕ್ತಿಗಳು ಮತ್ತು ಸಂಸ್ಥೆಗಳು) ಒತ್ತಡವನ್ನು ನೋಡಿಕೊಂಡು ಬಿಡಿ ಮಾರಾಟಗಾರರು ಎಲ್ಲೂ ಸಿಗುತ್ತಾರೆ, ಇನ್ನೂ ಸಾಕಷ್ಟು ಉಳಿದಿದ್ದಾರೆ! ಇಲ್ಲಿ ಡಿವಿಕೆ ಮೂರ್ತಿಯವರ ಕೊನೆಗಾಲದ ಮಾತುಗಳನ್ನು ಕೇಳಿ. “ರಾಜ್ಯ ಮತ್ತು ಹೊರನಾಡುಗಳೂ ಸೇರಿ ಮೊದಲೆಲ್ಲ ಇನ್ನೂರಕ್ಕೂ ಮಿಕ್ಕು ಬಿಡಿ ಪುಸ್ತಕ ವ್ಯಾಪಾರಿಗಳಿಗೆ ನಾನು ಪುಸ್ತಕ ಕಳಿಸಿಕೊಡುತ್ತಿದ್ದೆ. ಯಾವ್ಯಾವುದೋ ಗ್ರಾಮಾಂತರ ಪ್ರದೇಶಗಳಿಂದಲೂ ಅಲ್ಲಿನ ಶಾಲೆಯ ಗ್ರಂಥಾಲಯಕ್ಕೋ ಮಕ್ಕಳ ಅನಿವಾರ್ಯತೆಗೋ ಊರವರ ಕುತೂಹಲಕ್ಕೋ ಏನಿಲ್ಲವೆಂದರೂ ವರ್ಷಕ್ಕೆ ಒಂದೆರಡು ಬಾರಿಯಾದರೂ ಸ್ವತಃ ಮೈಸೂರಿಗೆ ಬಂದೋ ಪತ್ರ ಮುಖೇನ ಸಂಪರ್ಕಿಸಿಯೋ ಅಷ್ಟಿಷ್ಟು ಪುಸ್ತಕ ಒಯ್ಯುವ ಸಣ್ಣ ವ್ಯಾಪಾರಿಗಳಿರುತ್ತಿದ್ದರು. . .”
ಹೆಚ್ಚಿನ ಎಲ್ಲ ಸರಕಾರಗಳೂ (ಪಕ್ಷಾತೀತವಾಗಿ) ಜನಾಡಳಿತದ ವಿಕೇಂದ್ರೀಕರಣದ ಸುಳ್ಳನ್ನು ಬಿತ್ತರಿಸುತ್ತವೆ. ಅನಂತರ ಮೊದಲು ವೈಯಕ್ತಿಕ ಸ್ವಾರ್ಥ ಮತ್ತೆ ಸ್ವ-ಪಕ್ಷದ ಲಾಭಕ್ಕಾಗಿಯೇ ಸಾಮಾಜಿಕವಾಗಿ ಮೌಲಿಕವಾದ ಪ್ರತಿಯೊಂದು ಚಟುವಟಿಕೆಯಲ್ಲೂ ಹಸ್ತಕ್ಷೇಪ ನಡೆಸುತ್ತಾರೆ. (ಇಂದು ಮದುವೆಯಲ್ಲಿ ಮದುಮಗ, ಸ್ಮಶಾನದಲ್ಲಿ ಹೆಣವಾಗಲು ಇಚ್ಛಿಸದವ ರಾಜಕಾರಣಿಯಾಗುವುದು ಅಸಾಧ್ಯ) ಅದು ಪ್ರಾಮಾಣಿಕ ವೃತ್ತಿಪರರ ಮೇಲೆ ಮಾಡುತ್ತಿರುವ ಪರಿಣಾಮವನ್ನು ನಾನಿಲ್ಲಿ ಕೇವಲ ಪುಸ್ತಕೋದ್ಯಮಕ್ಕೆ ಅದರಲ್ಲೂ ತೀರಾ ಈಚಿನ ಕೆಲವೇ ಘಟನೆಗಳ ಮುನ್ನೆಲೆಯಲ್ಲಿ ಸಣ್ಣದಾಗಿ ವಿಶ್ಲೇಷಿಸುತ್ತೇನೆ.
ಕನ್ನಡ ಪುಸ್ತಕ ಪ್ರಾಧಿಕಾರ ಪ್ರಣೀತ ‘ಪುಸ್ತಕ ನೀತಿ’ ಇಂದು ಕನ್ನಡ ಪುಸ್ತಕೋದ್ಯಮದಲ್ಲಿ ಬಹಳ ಮುಖ್ಯ ವಿಷಯವೆಂಬಂತೆ ಬಿಂಬಿಸಲಾಗುತ್ತಿದೆ. ಇದು ನೆಲದ ಶಾಸನವೇ ಆದ unfair trade practiceಗೆ ಯಾವ ರೀತಿಯಲ್ಲೂ ಸಂಬಂಧಿಸಿದ್ದಲ್ಲ. ಇದರ ಅಂಕುರಾರ್ಪಣೆಯಾದದ್ದು ಪ್ರೊ ಎಸ್.ಜಿ. ಸಿದ್ಧರಾಮಯ್ಯನವರ ಕಪುಪ್ರಾ ಅಧ್ಯಕ್ಷಾವಧಿಯಲ್ಲಿ. ರಾಜ್ಯ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಒಂದು ಇಲಾಖೆ. ಅದಕ್ಕೆ ಅಧೀನ ಸಂಸ್ಥೆ ಕಪುಪ್ರಾ. ಅದರ ಒಂದು ಕಾಲಘಟ್ಟದ, ಓರ್ವ ನಾಮಾಂಕಿತ ಅಧ್ಯಕ್ಷ ತೇಲಿಬಿಟ್ಟ ಗುಳ್ಳೆ ಪುಸ್ತಕ ನೀತಿ. ಇದರ ಚರಮ ಲಕ್ಷ್ಯ ಓದುಗನಾಗಬೇಕಿತ್ತು. ಆದರೆ ವಿವರಗಳಲ್ಲಿ ಕಣ್ಣು ಹಾಯಿಸಿದವರಿಗೆ ಅದು ಕೇವಲ ಸರಕಾರೀ ಸಗಟು ಖರೀದಿಗೊಂದು ನೀತಿ ಪಟ್ಟಿ ಮಾತ್ರ ಎನ್ನುವುದು ಸ್ಪಷ್ಟವಿತ್ತು. ಇದು ಜ್ಯಾರಿಗೆ ಬಂದರೂ ಮೇಲಿನ ಸಂಸ್ಥೆಗಳಿಗೆ, ಅಂದರೆ ಸಂಸ್ಕೃತಿ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳು, ಪ್ರಾಧಿಕಾರಗಳು, ಹತ್ತೆಂಟು ಅಕಾಡೆಮಿಗಳು, ವಿವಿನಿಲಯಗಳಿಗೆ ಲಗಾವಾಗುವುದಿಲ್ಲ ಮತ್ತು ಕೊಳ್ಳುವ ಗಿರಾಕಿಗಳನ್ನು ನಿರ್ಬಂಧಿಸುವಲ್ಲೂ ಸೋಲುತ್ತದೆ. ಇದನ್ನು ಬಿಡಿಸಿ ಹೇಳುವುದಾದರೆ ಯಾವುದೇ ಪ್ರಕಾಶನ ಸಂಸ್ಥೆ ತನ್ನ ಪ್ರಕಟಣೆಗಳನ್ನು ಕಪುಪ್ರಾದ ಯಾವುದೇ ಯೋಜನೆಗಳನ್ನು ಬಯಸುವುದಿಲ್ಲವೆಂದರೆ ಈ ಪುಸ್ತಕ ನೀತಿ ಏನೂ ಮಾಡಲಾರದು. ಹಾಗೇ ಯಾವುದೇ ವ್ಯಕ್ತಿ, ಗ್ರಂಥಾಲಯಕ್ಕೆ ತನ್ನ ಪುಸ್ತಕ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಈ ‘ಪುಸ್ತಕ ನೀತಿ’ ವಿಷಯಕ ಗುಣಪಕ್ಷಪಾತಿಯಾಗಿ ದೃಢತೆ ಕೊಡುವುದೂ ಇಲ್ಲ.
ಪುಸ್ತಕ ನೀತಿ, ಪ್ರೊ ಎಸ್.ಜಿ. ಸಿದ್ಧರಾಮಯ್ಯನವರ ಕನಸಿನ ಕೂಸು. ಪ್ರಸ್ತುತ ಅಧ್ಯಕ್ಷ ಪ್ರೊ ಸಿದ್ಧಲಿಂಗಯ್ಯನವರ ಸೂಲಗಿತ್ತಿತನದಲ್ಲೂ ಅದು ಹೆರಿಗೆ ನೋವು ಕೊಡುತ್ತಲೇ ಇದೆ! ಇದು ರೂಪುಗೊಳ್ಳುವ ಹಂತದಲ್ಲೇ ನಾನು ಮೇಲೆ ಉಲ್ಲೇಖಿಸಿದ ಸರಳ ಪ್ರಶ್ನೆಗಳನ್ನು ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದೇ ಕೇಳಿದ್ದೆ. ಅದನ್ನು ದಿಟ್ಟವಾಗಿ ಎದುರಿಸಲಾಗದೇ ‘ಉಪಸಮಿತಿ’ (ಅಯಾಚಿತವಾಗಿ ನನ್ನನ್ನು ಸದಸ್ಯ ಮಾಡಿದ್ದರು!), ‘ಕಮ್ಮಟ’ (ಎರಡೆರಡು ಬಾರಿ ನನ್ನ ಅನುಕೂಲ ಕೇಳದೇ ಅದೂ ನನ್ನ ಕೆಲಸದ ದಿನಗಳಲ್ಲೇ ಒಂದೋ ಎರಡೋ ದಿನದ ಅವಕಾಶ ಮಾತ್ರ ಇಟ್ಟು ಕರೆ ಕಳಿಸಿದ್ದರು), ಕೊನೆಗೆ ‘ಬಹುಮತ’ (ಅಳಿದೂರಿಗೆ ಉಳಿದವನೇ ಗೌಡ) ಎಂಬ ಪ್ರಜಾತಾಂತ್ರಿಕ ಶಬ್ದ ಜಾಲದಲ್ಲಿ ಹುಗಿಯಲಾಯ್ತು. ಒಟ್ಟಾರೆ ಕನ್ನಡ ಪುಸ್ತಕೋದ್ಯಮವನ್ನು ಸದೃಢಗೊಳಿಸಬೇಕಾಗಿದ್ದ ಕಪುಪ್ರಾ ಕೇವಲ ಸರಕಾರೀ ಬಟವಾಡೆಗೆ ಇನ್ನೊಂದು ಮುಖವಾಗಿ, ಸಮರ್ಥ ನಿರ್ವಹಣೆಗಾಗಿ ವಿಭಾಗೀಕರಣ ಎಂಬ ತತ್ತ್ವದ ಅಣಕವಾಗಿ, ಕರದಾತನ ಋಣಪಾತಕವಾಗಿ ಮುಂದುವರಿದಿದೆ. ಪುಸ್ತಕೋದ್ಯಮದ ಎಲ್ಲವನ್ನೂ ಎಲ್ಲರನ್ನೂ ಮುಟ್ಟುವ ಮತ್ತು ಜನಪರವಾಗಿ ಬದಲಿಸುವಲ್ಲಿ ಸರ್ವಶಕ್ತವಾದ ‘ನಿಜ ಪುಸ್ತಕ ನೀತಿ’ ರೂಪುಗೊಳ್ಳಲು ಇನ್ನೊಂದೇ ‘ಅಣ್ಣಾಹಜಾರೆ’ ಹುಟ್ಟಬೇಕು.
ಕೃತಿಯ ಯೋಗ್ಯತೆಯನ್ನು ಅಚ್ಚಿನಮನೆಯ ವೆಚ್ಚದ ನೆಲೆಯಲ್ಲಿ, ಬಿಡುಗಡೆಯ ಅದ್ದೂರಿಯಲ್ಲಿ, ಪ್ರಚಾರ ತಂತ್ರದ ಪರಿಣತಿಯಲ್ಲಿ, ಬಹುಮುಖ್ಯವಾಗಿ ಸಾಹಿತ್ಯೇತರ ಪ್ರಭಾವಗಳಲ್ಲಿ ಕಾಣಿಸಲು ಸೋತ ನಾನು (ನನ್ನಂಥವರು) ಅತ್ರಿ ಪ್ರಕಾಶನವನ್ನು ಮುಚ್ಚಿದ್ದು ನಿಮಗೆಲ್ಲಾ ತಿಳಿದೇ ಇದೆ. ಅದು ಅವಸರದ ಹೆಜ್ಜೆಯಾಯ್ತು, ಇತರ ಪುಸ್ತಕ ವ್ಯಾಪಾರಿಗಳ ಮೂಲಕ ನೇರ ಓದುಗರಿಗೇ ಮಾರಬಹುದಿತ್ತಲ್ಲಾ ಎಂದು ಹೇಳಿದವರಿದ್ದಾರೆ. ಇಂದು ರಾಜ್ಯಾದ್ಯಂತ ಪುಸ್ತಕ ವ್ಯಾಪಾರಿಗಳ ವ್ಯವಸ್ಥೆ ಹೇಗಿದೆ ಎನ್ನುವುದಕ್ಕೆ ಮೇಲೆ ಉಲ್ಲೇಖಿಸಿದ ಡಿವಿಕೆ ಮೂರ್ತಿಯವರ ಕೊನೆಗಾಲದ ಮಾತಿನ ಉತ್ತರಾರ್ಧ ನೋಡಿ. “ಈಗ ರಾಜ್ಯಾದ್ಯಂತ ಬಿಡಿ, ನಾಲ್ಕೈದು ಜಿಲ್ಲಾ ಕೇಂದ್ರಗಳಿಂದಲೂ (ಮುಖ್ಯವಾಗಿ ಹೆಸರಿಸುವುದಾದರೆ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು) – a handful ರಿಟೇಲರ್ಸ್ ಮಾತ್ರ ಉಳಿದಿದ್ದಾರೆ.”
ಇಂದು ಶಾಲೆಗಳ ಮತ್ತು ಭಾಷಾ ಪಠ್ಯಗಳ ವಿಚಾರದಲ್ಲಿ ಕಾಲೇಜುಗಳ ಪಠ್ಯಗಳ ಆಯ್ಕೆ, ಪ್ರಕಟಣೆ, ಕೊನೆಗೆ ವಿತರಣೆಯೂ (ಎಷ್ಟು ಸಮರ್ಪಕ ಎಂದು ಕೇಳಬೇಡಿ) ಇಲಾಖೆಗಳ ಮಟ್ಟದಲ್ಲೇ ನಡೆದಿದೆ. ಅವುಗಳಲ್ಲಿ ಮೊದಲಿನಿಂದಲೂ ಅಷ್ಟಾಗಿ ತೊಡಗಿಕೊಳ್ಳದ ವ್ಯಾಪಾರಿ ನಾನು. ಹಾಗಾಗಿ ಕೇವಲ ಪೂರಕ ಸಾಹಿತ್ಯ ಮತ್ತು ಗ್ರಂಥಾಲಯ ಪೂರಣವನ್ನಷ್ಟೇ ಸಣ್ಣದಾಗಿ ಚರ್ಚಿಸುತ್ತೇನೆ. ಪಠ್ಯ ನಿರ್ದೇಶನಕ್ಕೆ ವಿಷಯ ತಜ್ಞರ ವರದಿಗಳು ಅನಿವಾರ್ಯ. ಆದರಿಂದು ಪೂರಕ ಓದು ಅಥವಾ ಸ್ಪಷ್ಟವಾಗಿ ಹೇಳುವುದಾದರೆ ಗ್ರಂಥಾಲಯ ಖರೀದಿಯ ಸ್ವಾತಂತ್ರ್ಯವನ್ನು ಶೈಕ್ಷಣಿಕ ಸಂಸ್ಥೆಗಳಿಂದ ವಂಚಿಸುವಂತೆ ಸರಕಾರೀ ಆಡಳಿತ ವ್ಯೂಹ ರಚಿಸಿದೆ. ಈ ವರ್ಷ ಎಲ್ಲಾ ಮಟ್ಟದ (ಪ್ರಾಥಮಿಕ, ಪ್ರೌಢ) ಬಹುತೇಕ ಶಾಲೆಗಳಿಗೆ ಇಲಾಖೆ ಘನ ಅನುದಾನವನ್ನೇನೋ ಕಡೇ ಗಳಿಗೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಜೊತೆಗೇ ಬಂದ ಆದೇಶ ಹೇಳುತ್ತದೆ ‘ನಿಮ್ಮ ಊರಿನ ಸಮೀಪದಲ್ಲಿ ಇಲಾಖೆಯೇ ನಡೆಸಿಕೊಡುವ ಪುಸ್ತಕ ಮೇಳದಲ್ಲೇ ಎಲ್ಲರೂ ಖರೀದಿ ನಡೆಸತಕ್ಕದ್ದು.’ ಪುಸ್ತಕ ಮೇಳಗಳಾದರೋ ಸ್ಥಳೀಯರನ್ನು ಅವಗಣಿಸಿ ಬೆಂಗಳೂರಿನಿಂದಲೇ ಆಯೋಜಿಸಲ್ಪಟ್ಟಿತ್ತು. ಅದರಲ್ಲಿ ಮುಖ್ಯ ಭಾಗಿಗಳು – ಕೆಲವು ಪುಸ್ತಕ ಪ್ರಕಾಶಕರು ಮತ್ತು ಅವರ ಪ್ರಕಟಣೆಗಳು. ಅಂದರೆ ಅಷ್ಟೂ ಪ್ರಕಾಶಕರು ಮತ್ತು ಇನ್ನೆಷ್ಟೋ ಹೆಚ್ಚಿನವರ ಪುಸ್ತಕ ವೈವಿಧ್ಯವನ್ನು ಪ್ರಾದೇಶಿಕವಾಗಿ ವರ್ಷ ಪೂರ್ತಿ ನೆರಹಿಕೊಂಡು, ಇಂಥಾ ಗಳಿಗೆಯಲ್ಲಿ ನ್ಯಾಯವಾಗಿ ಪೋಷಿಸಲ್ಪಡಬೇಕಾದ ಬಿಡಿ ವ್ಯಾಪಾರಿಗಳನ್ನು ಈ ಕ್ರಮ ವಂಚಿಸಿದೆ. ಮತ್ತೆ ಮೌಲಿಕವಾಗಿ ತಮ್ಮ ಗ್ರಂಥಾಲಯಗಳನ್ನೂ ಈ ಕ್ರಮ ವಂಚಿಸಿದೆ ಎಂದು ಗುಣಪಕ್ಷಪಾತಿಗಳಾದ ಹಲವು ಶಿಕ್ಷಕರು ಗೊಣಗಿದ್ದನ್ನೂ ನಾನು ಕೇಳಿದ್ದೇನೆ.ವಿವಿಧ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ, ಕಪುಪ್ರಾ ಪ್ರಾಯೋಜಿತವಾದ ಪುಸ್ತಕ ಮೇಳಗಳಲ್ಲಿ, ಮತ್ತೀಗ ಶಿಕ್ಷಣ ಇಲಾಖೆ ನೇರ ಶಾಲೆಗಳಿಗೇ ನಡೆಸಿದ ಪುಸ್ತಕ ಮೇಳದಲ್ಲಾದರೂ ಸಂಬಂಧಿಸಿದ ವಕ್ತಾರರು ಮತ್ತು ಪ್ರಾಯೋಜಿತ ಮಾಧ್ಯಮಗಳು ಬಿಂಬಿಸುವಷ್ಟು ‘ಅದ್ಭುತ’ ಘಟಿಸಿದೆಯೇ? ಮೊನ್ನೆ ತಾನೇ ಮಂಗಳೂರು, ಕಲ್ಲಡ್ಕ, ಪುತ್ತೂರುಗಳಲ್ಲಿ ಮೇಳ ಭಾಗಿಯಾಗಿ ಬಂದವರು ‘ಹಿರಿಯ’ ಪ್ರಕಾಶನ ಸಂಸ್ಥೆಗಳು ನಡೆಸುವ ಅನಾಚಾರದ ಬಗ್ಗೆ ಬಹಿರಂಗವಾಗಿ ದಾಖಲಿಸಲಾಗದ ಮಟ್ಟದಲ್ಲಿ ಹೇಳಿಕೊಂಡರು! ಎಲ್ಲ ಖರೀದಿಗಳ ಮೇಲೂ ಏಕಪ್ರಕಾರವಾದ ೧೫% ಸಾಂಸ್ಥಿಕ ವಟ್ಟಾ (ರಿಯಾಯ್ತಿ) ಮಾತ್ರ ಕೊಡುವುದೆಂದೂ (ಬಂದು ಹೋಗುವ, ಕಟ್ಟು ಸಾಗಿಸುವ) ಅನ್ಯ ವೆಚ್ಚಗಳನ್ನು ಅವರವರೇ ಭರಿಸಿಕೊಳ್ಳಲು ಬಿಡುವುದೆಂದೂ ನಿರ್ಧಾರವಾಗಿತ್ತು. ಆದರೆ ಸಾಂಸ್ಥಿಕ ದಾಖಲೆಗಳಲ್ಲಿ ಹೆಚ್ಚುವರಿ ರಿಯಾಯ್ತಿಯೆಂದೇ ಕಾಣಿಸಿ, ಖಾಸಗಿಯಾಗಿ ಬಟವಾಡೆಯಾದ ಇನಾಮು ಮತ್ತು ಸವಲತ್ತುಗಳು ಸಹಜವಾಗಿ ದೊಡ್ಡ ಬಂಡವಾಳಿಗರನ್ನೇ ದೊಡ್ಡ ಫಲಾನುಭವಿಯಾಗಳನ್ನಾಗಿಯೂ ತೋರಿಸಿತು.
ಮೊನ್ನೆಯಷ್ಟೇ ಬಳ್ಳಾರಿ ಮೇಳದಲ್ಲಿ ಭಾಗವಹಿಸಿ ಬಂದ ಗೆಳೆಯರೊಬ್ಬರ ಪತ್ರದ ಸಾರಾಂಶ ನೋಡಿ: “ಮೊನ್ನೆ ಬಳ್ಳಾರಿಯ ಪುಸ್ತಕ ಪ್ರದರ್ಶನಕ್ಕೆ ಹೊಗಿದ್ದೆ. ೨೦% ಡಿಸ್ಕೌಂಟ್ ಕಡ್ಡಾಯ ಮಾಡಿದ್ದಾರೆ. ಪ್ರಕಾಶಕರೇ ಅಲ್ಲದವರು ನೂರಾರು ಮಳಿಗೆ ಹಾಕಿ ೫೦-೬೦% ಡಿಸ್ಕೌಂಟ್ ಕೊಟ್ಟು ಪುಸ್ತಕ ಮಾರುತ್ತಿದ್ದರು. ನಮ್ಮಲ್ಲಿಗೂ ಅದನ್ನು ಬಯಸಿ ಬಂದವರನ್ನು ಬೈದು ಕಳಿಸಿದೆ. ನಾವು ಇದಕ್ಕೆಲ್ಲ ಸಾಕ್ಷಿಯಾಗಬೇಕಲ್ಲ ಎನಿಸುತ್ತದೆ. ಮುಂದಿನ ಬದುಕಿನ ಬಗೆಗೆ ಆಸಕ್ತಿ ಮತ್ತು ನಂಬಿಕೆಯೆ ಹೊರಟು ಹೋಗುತ್ತದೆ. ಮೈಸೂರಿನ ಕೆಲವು ಪ್ರಕಾಶಕರು ಟೀಚರ್ಸ್‌ಗಳನ್ನು ಕೂಡಾ ಕರಪ್ಟ್ ಮಾಡುತ್ತಿದ್ದಾರೆ. ಅವರು ಮಕ್ಕಳಲ್ಲಿ ಪುಸ್ತಕ ಪ್ರೀತಿ ಹೇಗೆ ಹುಟ್ಟಿಸಲು ಸಾಧ್ಯ? ಮುಂದಿನ ಜನಾಂಗ ಪುಸ್ತಕದ ಬಗೆಗೆ ಆಸಕ್ತಿ ಹುಟ್ಟುವುದು ಬೆಳೆಯುವುದು ಹೇಗೆ? ನಾವೆಲ್ಲಾ ಇಷ್ಟು ಶ್ರದ್ಧೆಯಿಂದ ಕಟ್ಟಿದ ಈ ಉದ್ಯಮ ಮುಂದಿನ ದಿನಗಳಲ್ಲಿ ಹೇಗೆ ಸಾಗುತ್ತದೆ? ತಲೆಯ ತುಂಬೆಲ್ಲಾ ಇದೇ ಯೋಚನೆ.” ಪ್ರಕಾಶಕನಿಂದ ಬಿಡಿ ಖರೀದಿದಾರನಿಗೆ ಪುಸ್ತಕಗಳನ್ನು ನೇರ ಮುಟ್ಟಿಸುವ ಇಂಥಾ ಯೋಜನೆಗಳೇ ಇಂದು ಪುಸ್ತಕೋದ್ಯಮವನ್ನು ಭ್ರಾಮಕ ಸ್ವರ್ಗಕ್ಕೆ ಎಳೆದೊಯ್ಯುತ್ತಿದೆ. (ಇಂಥಲ್ಲಿ ನನ್ನ ಪ್ರಕಟಣೆಗಳನ್ನು ರಾಜ್ಯಾದ್ಯಂತ ಓದುಗರಿಗೆ ಕಾಣಿಸುವ ಪ್ರಯತ್ನವೂ ಸೋತದ್ದು ಸಹಜವೇ ಇದೆ)
ರಾಜ್ಯದಲ್ಲಿ ಗ್ರಂಥಾಲಯ ಇಲಾಖೆಗೆ (ಇದು ಸರಕಾರದಡಿಯಲ್ಲಿ ಸ್ವತಂತ್ರ) ಜಿಲ್ಲಾ, ನಗರ, ತಾಲೂಕು ಮತ್ತೂ ಸಣ್ಣ ಮಟ್ಟದಲ್ಲಿ, ಸಂಚಾರೀ ರೂಪದಲ್ಲೂ ಶಾಖೋಪಶಾಖೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಇವೆ. ಇವೆಲ್ಲ ಬೆಂಗಳೂರು ಕೇಂದ್ರೀಕೃತ ಸಗಟು ಖರೀದಿ ಜಾಲದಲ್ಲಿ ಒದಗಿದವನ್ನೇ ‘ಅನುಭವಿಸಿಕೊಂಡು’ ಬಹುಕಾಲ ಪ್ರಾದೇಶಿಕ ಖರೀದಿಯಲ್ಲಿ ನಿರ್ವೀರ್ಯವಾಗಿದ್ದವು. ಈಚೆಗೆ ಅದು ಸ್ವಲ್ಪ ಮಟ್ಟಿಗೆ ಮುಕ್ತವಾದರೂ ಎಲ್ಲಾ ಸರಕಾರೀ ಇಲಾಖೆಗಳಂತೆ ಪಾರದರ್ಶಕವಾಗಿಲ್ಲ, ಜನ ಸ್ನೇಹಿಯಂತೂ ಖಂಡಿತಾ ಅಲ್ಲ. ಸಹಜವಾಗಿ ಪ್ರಾದೇಶಿಕ ಅಗತ್ಯಗಳನ್ನು ಒದಗಿಸುವ ಒತ್ತಡ ಮತ್ತದಕ್ಕಾಗಿ ಊರಿನ ಪುಸ್ತಕ ವ್ಯಾಪಾರಿಗಳೊಡನೆ ಚೊಕ್ಕ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನ ಎಂದೂ ಆದದ್ದಿಲ್ಲ.
ಹಿಂದೆಲ್ಲಾ ಸ್ವತಂತ್ರ ವೃತ್ತಿಯಾಗಿಯೇ ಯಶಸ್ವಿಯಾಗಿದ್ದ ಖಾಸಗಿ ಸರ್ಕುಲೇಟಿಂಗ್ ಲೈಬ್ರರಿ ಜಾಲ ಇಂದು ಬಹುತೇಕ ಮುಚ್ಚಿಹೋಗಿವೆ ಅಥವಾ ತುಂಬ ಶೋಚನೀಯ ಸ್ಥಿತಿಯಲ್ಲಿವೆ. ಅಂಚೆ, ಬ್ಯಾಂಕ್, ಮೊದಲಾದ ಸರಕಾರೀ ಮತ್ತು ಖಾಸಗಿ ದೊಡ್ಡ ಉದ್ಯಮಗಳು ತಮ್ಮ ಸದಸ್ಯರುಗಳಿಗಾಗಿಯೇ ಮನರಂಜನಾ ಸಂಘಗಳನ್ನು ಕಟ್ಟುವುದು ಇದ್ದದ್ದೇ. ಅಲ್ಲಿ ಲಘು ಓದಿಗೊಂದಷ್ಟು ಕಾದಂಬರಿಗಳು, ವ್ರತಕ್ಕೊಂದು ಅನುಷ್ಠಾನ ದೀಪಿಕೆ, ಪ್ರವಾಸಕ್ಕೊಂದು (ಕಥನ ಸಾಹಿತ್ಯ ಅಥವಾ ಕನಿಷ್ಠ) ಮಾರ್ಗದರ್ಶಿ, ನಾಲಿಗೆ ಚಪಲಕ್ಕೊಂದು ಸೂಪಶಾಸ್ತ್ರ, ಹಾಡಿಕೊಳ್ಳಲು ಭಜನಾಸಂಗ್ರಹ, ನೋಡಿಕೊಳ್ಳಲು ನಾಟಕ ಪಠ್ಯ, ಆಡಿಕೊಳ್ಳಲು ಪ್ರಸಂಗ ಸಾಹಿತ್ಯ, ಅನುಸರಿಸಲು ಆದರ್ಶಗಳ ಕೋಶ, ಹಗುರಾಗಲು ನಗೆಹನಿಗಳ ಸಂಗ್ರಹ, ಆರೋಗ್ಯಕ್ಕೆ ಕ್ರೀಡೆ ಯೋಗ, ಅನಾರೋಗ್ಯಕ್ಕೆ ಮನೆಯಲ್ಲೇ ವೈದ್ಯ ಇತ್ಯಾದಿ ಪುಸ್ತಕಗಳ ಕಪಾಟುಗಳನ್ನು ರುಚಿಕಟ್ಟಾಗಿ ನಿಲ್ಲಿಸಿಕೊಳ್ಳುತ್ತಿದ್ದರು. ಅಂಗಡಿ ಕಟ್ಟುವಲ್ಲಿ ವ್ಯಾಪಾರಿಗೆಷ್ಟು ಉತ್ಸಾಹವೋ ಈ ಜನಕ್ಕೆ ಕೊಳ್ಳುವಲ್ಲೂ ಅಷ್ಟು ಉಲ್ಲಾಸವಿರುತ್ತಿತ್ತು. ಇಂದಿನ ಜೀವನ ಶೈಲಿಯಲ್ಲಿ ಅವೆಲ್ಲ ಎಲ್ಲಿ ಸತ್ತು ಹೋದವೋ ನನಗಂತೂ ಕುರುಹು ಸಿಕ್ಕಿಲ್ಲ.
ಪುಸ್ತಕಗಳು ತಮ್ಮ ವೃತ್ತಿಜೀವನದ ಅವಿಭಾಜ್ಯ ಅಂಗ ಎನ್ನುವ ಶಿಕ್ಷಕವರ್ಗ ಇಂದು ಅಲ್ಪಸಂಖ್ಯಾತ. ಅಲ್ಲೂ ಸ್ವಂತ ಹಣದಿಂದಲ್ಲದಿದ್ದರೂ ತಮ್ಮ ಸಂಸ್ಥೆಯ ಗ್ರಂಥಾಲಯ ಖರೀದಿಗಾಗುವಾಗ ದೊಡ್ಡ ಮೊತ್ತ ಪಡೆಯುವಲ್ಲಿ ವಿಭಾಗ ವಿಭಾಗಗಳೊಳಗೆ ಸ್ಪರ್ಧೆ ಇರುತ್ತಿತ್ತು. ಇಂದು ಗ್ರಂಥಾಲಯ ಅನುದಾನ ಬರಿದೇ ವಾಪಾಸಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮ ಕತ್ತಿಗೆ ಕಟ್ಟಿ ಎಲ್ಲರೂ ‘ಅನ್ಯ ಕಾರ್ಯ’ ನಿರತರಾಗುತ್ತಾರೆಂದು ಹಲವು ಗ್ರಂಥಪಾಲರು ದೂರಿಕೊಳ್ಳುತ್ತಿದ್ದಾರೆ. ಹೀಗೇ ಸಾರ್ವಜನಿಕರಲ್ಲೂ ವೈವಿಧ್ಯಗಳನ್ನು ಗುರುತಿಸುವ, ಆಯ್ದುಕೊಳ್ಳುವ ಮತ್ತು ಖರೀದಿಸುವ ಜನ ದಿನೇ ದಿನೇ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಆದರೆ ಅವರಿಗೂ ಈಗ ಗೋರಿಕಲ್ಲೆಳೆಯುವ ವ್ಯವಸ್ಥೆ ಕೆಲವು ಖ್ಯಾತನಾಮ ಪ್ರಕಾಶಕರಿಂದಲೂ ಮಾಲ್ ಸಂಸ್ಕೃತಿಯಿಂದಲೂ ಬಲಗೊಳ್ಳುತ್ತಿವೆ. ಊರಿನೆಲ್ಲಾ ವ್ಯಾಪಾರವನ್ನು ತಮ್ಮ ಉಡಿಗೇ ಕವುಚಿಕೊಳ್ಳುವ ಇವರ ಧೋರಣೆಯ ಒಳಹೊರಗನ್ನು ನನ್ನ ಅನುಭವಕ್ಕೆ ದಕ್ಕಿದಷ್ಟನ್ನು ಹೇಳಿಬಿಡುತ್ತೇನೆ.
ನಗರದ ಭಾರೀ ಬಜಾರ್ ಒಂದರಲ್ಲಿ ಅಷ್ಟೇ ಭಾರೀ ಪುಸ್ತಕ ಮಳಿಗೆ ಬರಲಿದೆ ಎಂಬ ಸುದ್ದಿ ಬಂತು. ಒಂದು ದಿನ ಅದರೊಬ್ಬ ಖರೀದಿ ಪ್ರತಿನಿಧಿ ನನ್ನ ಪ್ರಕಟಣೆಗಳನ್ನು ಕೇಳಿ ಬಂದ. ಆತನಿಗೆ ನನ್ನ ಪ್ರಕಟಣೆಗಳ ಗುಣ, ತತ್ತ್ವಕ್ಕಿಂತಲೂ ಮುಖ್ಯವಾಗಿ ಆತನ ಸಂಸ್ಥೆಯ ಮಹತ್ತನ್ನು ಬಿಂಬಿಸಬೇಕಾಗಿತ್ತು. ಅವರ ಭಾಷೆಯಲ್ಲೇ ಹೇಳಬೇಕಾದರೆ ‘ಒಮ್ಮೆಗೆ ಟೈಟಲ್ಸ್ ನೋಡಿಕೊಂಡು ಹಂಡ್ರೆಡ್ಸಿನಲ್ಲಿ ಕಾಪೀಸ್ ಲಿಫ್ಟ್ ಮಾಡ್ತೇವೆ. ಟ್ರೇಡ್ ಟರ್ಮ್ಸ್ – ಮಿನಿಮಮ್ ೪೦% ಡಿಸ್ಕೌಂಟ್, ನೈಂಟಿ ಡೇಸ್ ಟೈಮ್ ಮತ್ತು ಕೊನೆಯಲ್ಲಿ (ಪ್ರಕಾಶಕನ ಶವಪೆಟ್ಟಿಗೆಗೆ ಹೊಡೆದ ಅಂತಿಮ ಮೊಳೆ) – ಅನ್‌ಲಿಮಿಟೆಡ್ ರಿಟರ್ನ್ಸ್.’ ಆದರೆ ಗ್ರಾಹಕನ ಕೊನೆಯಲ್ಲಿ ಈ ಮಾಲ್ ಒಡ್ಡುವ ಮುಖ ದೊಡ್ಡ ಕಮಾಲ್! ಕೇಂದ್ರೀಕೃತವಾಗಿ ಹವಾನಿಯಂತ್ರಿತ ಅದೆಷ್ಟೋ ಸಾವಿರ ಚದರಡಿಗಳ ಪ್ರದರ್ಶನಾಂಗಣದಲ್ಲಿ ಯವುದುಂಟು ಯಾವುದಿಲ್ಲ ಎನ್ನುವ ವೈವಿಧ್ಯ. ಕೆಲವೊಂದು ಶೀರ್ಷಿಕೆಗಳಂತೂ ನೂರಾರು ಪ್ರತಿಗಳ ಸಂಖ್ಯೆಯಲ್ಲೂ ಮೋಹಕ ವಿನ್ಯಾಸದಲ್ಲೂ ಆಕರ್ಷಕ ಬೆಳಕಿನಲ್ಲೂ ಹರಡಿಕೊಂಡಿರುವಾಗ ಗಿರಾಕಿ ಮರುಳುಗಟ್ಟದಿನ್ನೇನು. ಧಾರಾಳವಿರುವ ಆರಾಮಾಸನಗಳಲ್ಲಿ ಕೂತು, ನಿಂತು, ಕಾಫಿ ಹೀರುತ್ತಾ ಪುಸ್ತಕಗಳನ್ನು ನೋಡುವುದು ಮಾತ್ರವಲ್ಲ ನಿರ್ವಿಘ್ನವಾಗಿ ಓದಿ ಮತ್ತೂ ಬೇಕಾದರೆ ಕೊಳ್ಳುವ ಅನುಭವ ಯಾರನ್ನೂ ಮೋಹಪರವಶರನ್ನಾಗಿಸುವುದು ತಪ್ಪಲ್ಲ. ಅದರ ಮೇಲೆ ಕಾಲಕಾಲಕ್ಕೆ, ಕೆಲವು ವಿಭಾಗಕ್ಕೆ ವಿಶೇಷ ರಿಯಾಯ್ತಿಗಳು, ಬಹುಮಾನಗಳು. ಸಾಲದ್ದಕ್ಕೆ ಉಚಿತ ಸದಸ್ಯ ಕಾರ್ಡು ಪಡೆದರೆ ಎಷ್ಟು ಸಣ್ಣ ಖರೀದಿಗೂ ಖಾಯಂ ರಿಯಾಯ್ತಿ, ಇಲ್ಲಿ ಸವಲತ್ತುಗಳ ಬಾಲ ಹನುಮಂತನದ್ದು.
ನಾನೇನೋ ಪುಸ್ತಕ ಒದಗಿಸಲಿಲ್ಲ. ಆದರೇನು ಮಾಲ್ ತೆರೆದಾಗ ಜನಪ್ರಿಯ ಲೇಖಕರೆಲ್ಲರ ಕೃತಿಗಳ ಸಂತೆ ಅಲ್ಲಿ ನೆರೆದಿತ್ತು. ಮಾಲ್ ಖ್ಯಾತಿಗೆ ಕುಂದು ಬಾರದಂತೆ ಒಂದು ವಾರ ‘ಇನಾಗುರಲ್ ಆಫರ್ ೫೦%’ ಮುಂದೆ ತಿಂಗಳ ಕಾಲ ೨೦%. ನನ್ನ ಆಶ್ಚರ್ಯಕ್ಕೆ ಮೇರೆ ಇಲ್ಲದಂತೆ ಖ್ಯಾತ ಸಾಹಿತಿ ಭೈರಪ್ಪನವರ ಕೃತಿಗಳೂ ಅಲ್ಲಿತ್ತು. ಅವುಗಳ ಪ್ರಕಾಶಕ – ಸಾಹಿತ್ಯ ಭಂಡಾರ, ವ್ಯಾಪಾರೀ ಧೋರಣೆಯಲ್ಲಿ ಬಲುಬಿಗಿ. ಅವರು ಯಾವುದೇ ಪುಸ್ತಕ ವ್ಯಾಪಾರಿಗೆ ೨೫% ಮಿಕ್ಕು ವ್ಯಾಪಾರೀ ವಟ್ಟಾ ಕೊಟ್ಟದ್ದಿಲ್ಲ. ಸಾಲದ ಲೆಕ್ಕ ಬರೆಸುವವರಿಗೆ ಇವರು ಮಣೆ ಹಾಕಿದ್ದೂ ಇಲ್ಲ. ಅಂದರೆ ಮಾಲ್‌ನಲ್ಲಿ ಕಳ್ಳಮಾಲು? ಊಹುಂ, ಸಾಧ್ಯವೇ ಇಲ್ಲ. ಇಂದು ಕಳ್ಳ ಮುದ್ರಣದ ಅಗತ್ಯ ಬರುವಷ್ಟು ಕನ್ನಡ ಪ್ರಕಾಶನರಂಗ ಸಮೃದ್ಧವಾಗಿ ಉಳಿದಿಲ್ಲ. ಕುತೂಹಲಕ್ಕೆ ಭಂಡಾರಕ್ಕೇ ದೂರವಾಣಿಸಿದೆ. ಯಜಮಾನರಲ್ಲಿ ಒಬ್ಬರಾದ ರಾಜ ಹೇಳುವಂತೆ ಬೆಂಗಳೂರಿನದೇ ಇನ್ಯಾರೋ ಪುಸ್ತಕ ವ್ಯಾಪಾರಿಗಳೊಡನೆ ಮಾಲ್‌ನವರು ಮಾಡಿಕೊಂಡ ಒಳ-ಒಪ್ಪಂದದ ಫಲವಂತೆ. ಅನಿವಾರ್ಯ ಪುಸ್ತಕಗಳನ್ನು ಕಡಿಮೆ ದರದಲ್ಲಾದರೂ ಕೊಂಡು, ಸಣ್ಣ ನಷ್ಟದಲ್ಲಾದರೂ ಗಿರಾಕಿ ಹಿಡಿದಿಡುವ ಬುದ್ಧಿವಂತಿಕೆ. ಮುಂದೆ ಊರೂರಿನ ಪುಸ್ತಕ ಮಾರುಕಟ್ಟೆಯ ಏಕಸ್ವಾಮ್ಯ ಹಿಡಿದಾಗ ಅದೇ ಪೀಠದಲ್ಲಿ ಗಿರಾಕಿಯನ್ನೂ ಪ್ರಕಾಶಕನನ್ನೂ ಬಲಿಗೊಟ್ಟು ದಕ್ಕಿಸಿಕೊಳ್ಳುವ ಹುನ್ನಾರ. (ಕ್ಷುದ್ರ ಬಯಕೆಗಳಲ್ಲಿ ಜಯಿಸಿ, ಮಹತ್ತಿನಲ್ಲಿ ಬಿದ್ದ ಮ್ಯಾಕ್‌ಬೆತ್ ನೆನಪಿಸಿಕೊಳ್ಳಿ) ಇವನ್ನೆಲ್ಲಾ ವಿವರಿಸ ಹೋಗುವ ಬಿಡಿ ಪುಸ್ತಕ ವ್ಯಾಪಾರಿ ‘ಅತಿಲಾಭದಲ್ಲಿ’ ಪಾಲು ಕೊಡಲು ಹಿಂಜರಿವ ಜುಗ್ಗ, ಅವಾಸ್ತವವಾದಿ. ಸೂಪರ್ ಬಜಾರುಗಳಿಗೆ ಎರವಾದ ಜಿನಸಿನ ಅಂಗಡಿಗಳಂತೆ, ಸ್ಪೆಷಲಿಸ್ಟ್ ವೈದ್ಯರುಗಳು ಮತ್ತು ಹೈಟೆಕ್ ಆಸ್ಪತ್ರೆಗಳೂ ಬರುತ್ತಿದ್ದಂತೆ ಖಿಲವಾದ ಕುಟುಂಬ ವೈದ್ಯರಂತೆ, ಬ್ರಾಂಡೆಡ್ ದಿರುಸು ಆಭರಣಗಳ ಸುನಾಮಿ ಬಡಿಯುತ್ತಾ ದರ್ಜಿ ಅಕ್ಕಸಾಲಿಗಳು ಕೊಚ್ಚಿ ಹೋಗುತ್ತಿರುವ ಹಾಗೆ (ಪಟ್ಟಿಯನ್ನು ನೀವೆಲ್ಲಿಯವರೆಗೂ ಬೆಳೆಸಬಹುದು) ಬಿಡಿ ಪುಸ್ತಕ ವ್ಯಾಪಾರಿಗಳೂ ಬಾಗಿಲು ಹಾಕುವ ದಿನಗಳು ದೂರವಿಲ್ಲ. ಆದರೆ ನೆನಪಿರಲಿ, ಪ್ರವಾಹದ ಸೆಳೆತಕ್ಕೆ ಉದುರೆಲೆ ಕಡ್ಡಿಗಳಷ್ಟೇ ಕೊಚ್ಚಿಹೋಗುವುದಲ್ಲ, ಬೇರು ಬಿಟ್ಟ ಮರಗಳೂ ಸರದಿಯಲ್ಲಿರುತ್ತವೆ!
ಬೆಂಗಳೂರಿನಲ್ಲಿಂದು ಸರಾಸರಿಯಲ್ಲಿ ಕನಿಷ್ಠ ವಾರಕ್ಕೊಂದರಂತೆ ಕನ್ನಡ ಪುಸ್ತಕ ಪ್ರಕಟವಾಗುತ್ತಲೇ ಇದೆ. ಅದೂ ಅಬ್ಬರದ ಬಿಡುಗಡೆ ಸಮಾರಂಭ. ಭೋರ್ಗಾಳಿಯೇನು, ಮಿಂಚಿನ ಸೆಳಕೆಷ್ಟು, ಇನ್ನು ಗುಡುಗು ಅಬ್ಬಬ್ಬ, ಪ್ರವಾಹ ಸಾಕ್ಷಾತ್ ಗಂಗಾವತರಣ! ಆದರೇನು, ಫ಼ೇವರ್ ಫ಼ಿನಿಶ್ಡ್ ಡಾಮರು ಮಾರ್ಗಗಳಲ್ಲಿ, ಕಾಂಕ್ರೀಟೀಕರಣಗೊಂಡ ಚತುಷ್ಪಥಗಳಲ್ಲಿ, ಇಂಟರ್ಲಾಕ್ಡ್ ಅಥವಾ ಲ್ಯಾಂಡ್‌ಸ್ಕೇಪ್ಡ್ ಹಾಸುಗಳಲ್ಲಿ ಸ್ಮೂತಾಗಿ ಸರಿದು ಭೂಗತ ಚರಂಡಿಗಳಲ್ಲಿ ಲೀನ. ಬೆರಗಿನಲ್ಲೇ ಮೊಗೆದಿರೋ ನೀವು ಧನ್ಯರು. ವ್ಯವಸ್ಥೆಯಲ್ಲಿ ಸೋರಿತೋ ನೆಲದ ಭಾಗ್ಯ. ನನ್ನ ಕೈ ಸ್ವಲ್ಪ ಉದ್ದ. ಬೆಂಗಳೂರಿನ ಮಳೆಗೆ ನಾನು ಯಥಾನುಶಕ್ತಿ ಚೊಂಬು ಚರಿಗೆ ಒಡ್ಡುವುದುಂಟು. ಮಂಗಳೂರಿನ ದಾಹಕ್ಕೆ ನಾಲ್ಕು ಹನಿ ಸಿಂಪಡಿಸುತ್ತಿದ್ದುಂಟು. ಆದರೀಚೆಗೆ ನದಿ ತಿರುಗಿಸುವ ಜಾಣರು ಹೆಚ್ಚಿದ್ದಾರೆ. ಪುತ್ತೂರಿನ ಶಾರದಾ ಪುಸ್ತಕ ಮಳಿಗೆಯ ಯಜಮಾನರ ಮಾತು ಕೇಳಿ. “ಸಣ್ಣ ಊರಿನಲ್ಲಿ ಹೊಸಹೊಸತನ್ನು ಬಂದಂತೆ ಸ್ವಾಗತಿಸುವವರು ಎಷ್ಟೆಂದು ಬಲುಬೇಗನೇ ಗುರುತಿಸಬಹುದು. ಅವರಿಗೆ ನೇರ ಪುಸ್ತಕ ಒದಗಿಸುವ ಉತ್ಸಾಹ ಪ್ರಕಾಶಕರದ್ದು. ಅವರು ಮರೆತರೂ ಮನೆಮನೆಗೆ ಮುಟ್ಟಿಸುವ ತಿರುಗೂಳಿಗಳಿದ್ದಾರೆ. ನಾನೀಗಾಗಲೇ ಪುಸ್ತಕ ವ್ಯಾಪಾರದಿಂದ ಡೈವರ್ಶನ್ ಹುಡುಕಿಕೊಂಡು, ರೂಢಿಸುತ್ತಿದ್ದೇನೆ.” ನನ್ನಲ್ಲಿಯೂ ಹರಿವು ಬಡವಾಗುತ್ತಿದೆ. ವಾರವಾರದ ಪುಸ್ತಕದ ಮೇಲೆ ಪುಸ್ತಕ ಬಿದ್ದು ದೂಳು ಸೇರುತ್ತಿದೆ. ಪ್ರಕಾಶನ ಮುಚ್ಚಿದಾಗ “ಹಾಗೊಂದು ಇತ್ತೇ?” ಎಂದು ಕೇಳಿದವರಿದ್ದಾರೆ. “ಅಂಗಡಿಯೇ ಮುಚ್ಚಿತೆಂದು ತಿಳಿದೆ” ಎಂದವರೂ ಇದ್ದಾರೆ. ನಡೆಯಬಲ್ಲವನಿಗೆ ದಾರಿ ಅನಂತ.